ಬರ್ಮಿಂಗ್ಹ್ಯಾಮ್(ಯುಕೆ): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಅಥ್ಲಿಟ್ಸ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಇದೀಗ ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡ ಫೈನಲ್ಗೆ ಲಗ್ಗೆ ಹಾಕಿದ್ದು, ಈ ಮೂಲಕ ಮತ್ತೊಂದು ಪದಕ ಖಾತ್ರಿಪಡಿಸಿದೆ. ವಿಶೇಷವೆಂದರೆ, ಈ ಮೂಲಕ ಲಾನ್ ಬೌಲ್ಸ್ನಲ್ಲಿ ಭಾರತದ ಚೊಚ್ಚಲ, ಐತಿಹಾಸಿಕ ಪದಕ ಸಾಧನೆಗೆ ಕ್ಷಣಗಣನೆ ಶುರುವಾಗಿದೆ.
ಬಲಿಷ್ಠ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 16-13ರ ಅಂತರದಿಂದ ಗೆಲುವು ದಾಖಲಿಸಿತು. ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ತಂಡ ಅದ್ಭುತ ಪ್ರದರ್ಶನ ನೀಡಿದ್ದು, ಫೈನಲ್ನಲ್ಲಿ ಸ್ವರ್ಣ ಪದಕಕ್ಕಾಗಿ ಹೋರಾಟ ನಡೆಸಲಿದೆ. ಒಂದು ವೇಳೆ ಸೋತರೂ ಭಾರತೀಯ ತಂಡ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳಲಿದೆ.
ಇದನ್ನೂ ಓದಿ: "ಚಿನ್ನ" ಎತ್ತಿದ ಅಚಿಂತ ಶೆಯುಲಿ, ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ 3ನೇ ಬಂಗಾರ
ಈ ಕ್ರೀಡೆಯಲ್ಲಿ ನ್ಯೂಜಿಲ್ಯಾಂಡ್ ಈಗಾಗಲೇ 40 ಪದಕ ಗೆದ್ದಿದೆ. ಆದರೆ, ಇಂದು ನಡೆದ ಸೆಮೀಸ್ನಲ್ಲಿ ಭಾರತದ ಅಮೋಘ ಆಟಕ್ಕೆ ಕಿವೀಸ್ ಸೋತು ನಿರ್ಗಮಿಸಿತು. ಉಳಿದಂತೆ, ವೆಟ್ ಲಿಫ್ಟಿಂಗ್ನಲ್ಲಿ ಭರವಸೆ ಮೂಡಿಸಿದ್ದ ಅಜಯ್ ಸಿಂಗ್ ಪದಕ ವಂಚಿತರಾಗಿದ್ದಾರೆ. 50 ಮೀಟರ್ ಪುರುಷರ ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ ಫೈನಲ್ ಪ್ರವೇಶ ಪಡೆದುಕೊಂಡಿದ್ದು, ಪದಕದಕಾಸೆ ಜೀವಂತವಾಗಿದೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಈಗಾಗಲೇ 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆಲ್ಲುವ ಮೂಲಕ ಆರನೇ ಸ್ಥಾನದಲ್ಲಿದೆ. 22 ಚಿನ್ನ, 13 ಬೆಳ್ಳಿ ಹಾಗೂ 18 ಕಂಚು ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.