ನವದೆಹಲಿ : ಭಾರತ ಬಾಕ್ಸರ್ ಸುಮಿತ್ ಕುಂಡು(75ಕೆಜಿ) ಅವರು ವಿಶ್ವಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ರಷ್ಯಾದ ಜಾಂಬುಲತ್ ಬಿಜಮೊವ್ ವಿರುದ್ಧ ಗೆದ್ದು ಬಲ್ಗೇರಿಯಾದ ಸೊಫಿಯಾದಲ್ಲಿ ನಡೆಯುತ್ತಿರುವ 73ನೇ ಸ್ಟ್ರಾಂಡ್ಜಾ ಮೆಮೊರಿಯಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಸೀನಿಯರ್ ಹಂತದಲ್ಲಿ ಕೇವಲ 2ನೇ ಅಂತಾರಾಷ್ಟ್ರೀಯ ಟೂರ್ನಮೆಂಟ್ ಆಡುತ್ತಿರುವ ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಸುಮಿತ್ 5-0 ಅಂತರದಲ್ಲಿ ಬಿಜಮೊವ್ ವಿರುದ್ಧ ಪ್ರಾಬಲ್ಯಯುತ ಜಯ ಸಾಧಿಸಿದರು. ಭಾರತದ ಬಾಕ್ಸರ್ ತಮ್ಮ ಮುಂದಿನ ಸುತ್ತಿನಲ್ಲಿ ಉಕ್ರೇನ್ನ ಅಲೆಕ್ಸಾಂಡರ್ ಖಿಜ್ನಿಯಾಕ್ ವಿರುದ್ಧ ಸೆಣಸಾಡಲಿದ್ದಾರೆ.
ಸುಮಿತ್ ಹೊರೆತು ಪಡಿಸಿ ಭಾನುವಾರ ಕಣಕ್ಕಿಳಿದಿದ್ದ ಮೂವರು ಬಾಕ್ಸರ್ಗಳು ಸೋಲುಂಡರು. ನರೇಂದ್ರ ಬೆರ್ವಾಲ್(92+ಕೆಜಿ) ಸ್ಪೇನ್ನ ಆಯುಬ್ ಘಡ್ಫಾ ದ್ರಿಸಿ ವಿರುದ್ಧ 2-3ರಲ್ಲಿ, ವರಿಂದರ್ ಸಿಂಗ್(60ಕೆಜಿ) ಮತ್ತು ಲಕ್ಷ್ಯ ಚಾಹರ್ ರಷ್ಯಾದ ಆರ್ತರ್ ಸಬ್ಖಾನ್ಕುಲೋವ್ ಮತ್ತು ಶರಾಬುಟಿನ್ ಅಟೇವ್ ವಿರುದ್ಧ ಕ್ರಮವಾಗಿ 0-5, 1-4ರಲ್ಲಿ ಸೋಲುಂಡರು.
ಯುರೋಪ್ನ ಅತ್ಯಂತ ಹಳೆಯ ಟೂರ್ನಮೆಂಟ್ನ 2ನೇ ದಿನ ಭಾರತದ 4 ಬಾಕ್ಸರ್ಗಳು ರಿಂಗ್ಗೆ ಇಳಿಯಲಿದ್ದಾರೆ. ಶಿಕ್ಷಾ(54 ಕೆಜಿ), ನೀತು(48 ಕೆಜಿ), ಅನಾಮಿಕ(50ಕೆಜಿ) ಮಹಿಳೆಯರ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.
ಪುರುಷರ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿ ಬೈ ಪಡೆದಿರುವ ಅಕಾಶ್ ಸಂಗ್ವಾನ್(67 ಕೆಜಿ) ಜರ್ಮನ್ನ ಡೇನಿಯಲ್ ಕ್ರೋಟರ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಈ ಟೂರ್ನಮೆಂಟ್ನಲ್ಲಿ ಬಲಿಷ್ಠ ಬಾಕ್ಸರ್ಗಳನ್ನು ಹೊಂದಿರುವ ಇಟಲಿ, ಕಜಕಸ್ತಾನ್ ಮತ್ತು ರಷ್ಯಾ ಸೇರಿದಂತೆ 36 ರಾಷ್ಟ್ರಗಳ 450 ಬಾಕ್ಸರ್ಗಳು ಕಣಕ್ಕಿಳಿಯಲಿದ್ದಾರೆ. ಭಾರತದಿಂದ 10 ಮಹಿಳಾ ಬಾಕ್ಸರ್ ಮತ್ತು 7 ಪುರುಷ ಬಾಕ್ಸರ್ ಭಾಗವಹಿಸಿದ್ದಾರೆ.
ಕಳೆದ ಟೂರ್ನಮೆಂಟ್ನಲ್ಲಿ ದೀಪಕ್ ಕುಮಾರ್ ಬೆಳ್ಳಿ ಪದಕ ಮತ್ತು ನವೀನ್ ಬೂರಾ ಕಂಚಿನ ಪದಕ ಪಡೆದಿದ್ದರು.
ಇದನ್ನೂ ಓದಿ:ಭಾರತದ ವಿರುದ್ಧ ಟಿ-20 ಸರಣಿಗೆ 18 ಸದಸ್ಯರ ತಂಡ ಪ್ರಕಟಿಸಿದ ಶ್ರೀಲಂಕಾ