ಅಮ್ಮಾನ್: ಭಾರತೀಯ ಬಾಕ್ಸರ್ ಸಿಮ್ರಾಂಜಿತ್ ಕೌರ್ (60 ಕೆಜಿ) ಮಂಗೋಲಿಯಾದ ನಮುನ್ ಮೊನ್ಖೋರ್ ವಿರುದ್ಧ 5-0 ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಏಷ್ಯನ್/ಓಷಿಯನ್ ಓಲಂಪಿಕ್ನ ಕ್ವಾಲಿಫೈಯರ್ಗೆ ಪ್ರವೇಶಿಸಿದ್ದಾರೆ.
ಅಷ್ಟೇ ಅಲ್ಲದೆ, ಮೊನ್ಖೋರ್ ವಿರುದ್ಧ ಈ ಗೆಲುವು ದಾಖಲಿಸುತ್ತಿದ್ದಂತೆ ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದ 8ನೇ ಭಾರತೀಯ ಬಾಕ್ಸರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಸಿಮ್ರಾಂಜಿತ್ ಕೌರ್. ಸಿಮ್ರಾಂಜಿತ್ ಮುಂದಿನ ಸೆಮಿಫೈನಲ್ನಲ್ಲಿ ಚೀನಾದ ತೈಪೆಯ ಶಿಹ್-ಯಿ ವು ಅವರನ್ನು ಎದುರಿಸಲಿದ್ದಾರೆ.
ಅರ್ಹತೆ ಪಡೆದವರು: ಅಮಿತ್ ಪಂಗಲ್, ಪೂಜಾ ರಾಣಿ, ಲೋವ್ಲಿನಾ ಬೊರ್ಗೊಹೈನ್, ವಿಕಾಸ್ ಕ್ರಿಶನ್, ಸತೀಶ್ ಕುಮಾರ್, ಮೇರಿ ಕೋಮ್ ಮತ್ತು ಆಶಿಶ್ ಕುಮಾರ್ ಈಗಾಗಲೇ ಟೋಕಿಯೊ ಒಲಂಪಿಕ್ಗೆ ಅರ್ಹತೆ ಪಡೆದವರು.
ವಿಶ್ವ ಚಾಂಪಿಯನ್ಶಿಪ್ನ ಕಂಚಿನ ಪದಕ ವಿಜೇತ ಮನೀಶ್ ಕೌಶಿಕ್ (63 ಕೆಜಿ) ಕ್ವಾರ್ಟರ್ ಫೈನಲ್ನಲ್ಲಿ ಮಂಗೋಲಿಯಾದ ಚಿಂಜೋರಿಗ್ ಬತಾರ್ಸುಖ್ ವಿರುದ್ಧ 2-3 ಅಂತರದಲ್ಲಿ ಅಘಾತ ಅನುಭವಿಸಿದ್ದಾರೆ. ಆದರೂ ಅವರು ಓಲಂಪಿಕ್ಗೆ ಅರ್ಹತೆ ಪಡೆಯುವ ಕನಸು ನನಸು ಮಾಡಿಕೊಳ್ಳಲು ಇನ್ನೂ ಅವಕಾಶ ಇದೆ.
63 ಕೆಜಿ ವಿಭಾಗದಲ್ಲಿ ಕ್ವಾಟರ್ ಫೈನಲ್ ಸೋತ 6 ಬಾಕ್ಸರ್ಗಳು ಮತ್ತೊಮ್ಮೆ ಸೆಣಸಾಡಲಿದ್ದಾರೆ. ಇಲ್ಲಿ ಗೆದ್ದವರು ಓಲಂಪಿಕ್ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಇಲ್ಲಿ ಮನೀಷ್ ಆಸ್ಟ್ರೇಲಿಯಾದ ಹ್ಯಾರಿಸನ್ ಗಾರ್ಸೈಡ್ ಅವರನ್ನು ಎದುರಿಸಲಿದ್ದಾರೆ. ಕ್ವಾಟರ್ ಫೈನಲ್ ಸೋತ 81 ಕೆಜಿ ವಿಭಾಗದಲ್ಲಿ ಸಚಿನ್ ಕುಮಾರ್ ಕೂಡ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.