ಅಲ್ಖೋರ್(ಕತಾರ್): ಅರಬ್ ರಾಷ್ಟ್ರ ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಅಚ್ಚರಿ ಫಲಿತಾಂಶಗಳಿಗೆ ಸಾಕ್ಷಿಯಾಗುತ್ತಿದೆ. ನಿನ್ನೆಯಷ್ಟೇ ವಿಶ್ವಶ್ರೇಷ್ಠ ತಂಡವಾದ ಅರ್ಜೆಂಟೀನಾಗೆ, ಬಾಲಂಗೋಚಿ ಸೌದಿ ಅರೇಬಿಯಾ ಶಾಕ್ ನೀಡಿದ ಬಳಿಕ ಇಂದು ನಡೆದ 2018 ರ ಫೈನಲಿಸ್ಟ್ ತಂಡವಾದ ಕ್ರೊವೇಷಿಯಾ ವಿರುದ್ಧ ಮೊರಾಕ್ಕೊ 0-0 ಯಲ್ಲಿ ಡ್ರಾ ಸಾಧಿಸಿ ಬೀಗಿದೆ.
ಪಂದ್ಯದಲ್ಲಿ ಕ್ರೊವೇಷಿಯಾ ತಂಡ ಹಲವು ಬಾರಿ ಗೋಲು ಗಳಿಸಲು ಸತತ ಪ್ರಯತ್ನ ನಡೆಸಿತು. ಆದರೆ, ಮೊರಾಕ್ಕೊದ ಗೋಲ್ಕೀಪರ್ ಇದಕ್ಕೆ ಅವಕಾಶವೇ ನೀಡಲಿಲ್ಲ. ಕ್ರೊವೇಷಿಯಾ ತಂಡದ ನಾಯಕ ಲೂಕಾ ಮಾಡ್ರಿಕ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು.
ಅಂತಿಮ ವಿಶ್ವಕಪ್ ಆಡುತ್ತಿರುವ ಲೂಕಾ ಮಾಡ್ರಿಕ್ 2ನೇ ಅವಧಿಯ ಆರಂಭದಲ್ಲಿಯೇ ಗೋಲು ಗಳಿಸುವ ಯತ್ನ ಅದ್ಭುತವಾಗಿತ್ತು. ಇದರಿಂದಾಗಿ ಲೂಕಾ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದರು. ಗ್ರೂಪ್ ಎಫ್ನಲ್ಲಿರುವ ಮೊರಾಕ್ಕೊ ಮುಂದಿನ ಪಂದ್ಯದಲ್ಲಿ 2ನೇ ಶ್ರೇಯಾಂಕದ ಬೆಲ್ಜಿಯಂ ತಂಡವನ್ನು ಎದುರಿಸಿದರೆ, ಕ್ರೊಯೇಷಿಯಾ, ಕೆನಡಾ ವಿರುದ್ಧ ಕಣಕ್ಕಿಳಿಯಲಿದೆ.