ಮುಂಬೈ: ಹಾಲಿ ಚಾಂಪಿಯನ್ ಭಾರತ ತಂಡ ಭುವನೇಶ್ವರದಲ್ಲಿ ನವೆಂಬರ್ 24ರಿಂದ ಡಿಸೆಂಬರ್ 5ರವರೆಗೆ ನಡೆಯಲಿರುವ ಎಫ್‌ಐಹೆಚ್ ಜ್ಯೂನಿಯರ್ ಪುರುಷರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಸುಲಭ ಎದುರಾಳಿಗಳಿರುವ ಬಿ ಗುಂಪಿನಲ್ಲಿ ಅವಕಾಶ ಪಡೆದುಕೊಂಡಿದೆ.
ಭಾರತ ನವೆಂಬರ್ 24ರಂದು ಫ್ರಾನ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಇವರೆಡು ತಂಡಗಳ ಜೊತೆಗೆ ಬಿ ಗುಂಪಿನಲ್ಲಿ ಕೆನಡಾ ಮತ್ತು ಪೋಲೆಂಡ್ ಅವಕಾಶ ಪಡೆದಿವೆ. ಇದೇ ಗುಂಪಿನಲ್ಲಿದ್ದ ಇಂಗ್ಲೆಂಡ್ ತಂಡ ಕೋವಿಡ್-19 ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದ ಕಾರಣ ಪೋಲೆಂಡ್ಗೆ ಬದಲಿ ತಂಡವಾಗಿ ಭಾಗವಹಿಸುತ್ತಿದೆ.
16 ತಂಡಗಳು ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿವೆ. ಪ್ರತಿ ಗುಂಪಿನಲ್ಲೂ ತಲಾ 4 ತಂಡಗಳಿರಲಿವೆ. ಎ ಗುಂಪಿನಲ್ಲಿ ಬೆಲ್ಜಿಯಂ, ಚಿಲಿ, ಮಲೇಷ್ಯಾ ಮತ್ತು ದಕ್ಷಿಣ ಆಫ್ರಿಕಾ. ಸಿ ಗುಂಪಿನಲ್ಲಿ ದಕ್ಷಿಣ ಕೊರಿಯಾ, ನೆದರ್ಲೆಂಡ್ಸ್, ಸ್ಪೇನ್ ಮತ್ತು ಅಮೆರಿಕ ತಂಡಗಳಿದ್ದರೆ, ಅರ್ಜೆಂಟೀನಾ, ಈಜಿಪ್ಟ್, ಜರ್ಮನಿ ಮತ್ತು ಪಾಕಿಸ್ತಾನ ತಂಡಗಳು 'ಡಿ' ಗುಂಪಿನಲ್ಲಿವೆ.
ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಡಿಸೆಂಬರ್ 1ರಂದು ನಡೆಯಲಿರುವ ನಾಕ್ಔಟ್ಗೆ ಅರ್ಹತೆ ಪಡೆಯಲಿವೆ. ಡಿಸೆಂಬರ್ 3ರಂದು ಸೆಮಿಫೈನಲ್ಸ್ ಮತ್ತು ಡಿಸೆಂಬರ್ 5ರಂದು ಫೈನಲ್ ನಡೆಯಲಿದೆ. ಭುನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ವಿಶ್ವಕಪ್ ಪಂದ್ಯ ನಡೆಯಲಿವೆ. ಒಡಿಶಾ ಸರ್ಕಾರ ಶೇ.30ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ನಿರೀಕ್ಷೆಯಿದೆ.
ಇದನ್ನು ಓದಿ:ಇದು ಸ್ಪಿನ್ನರ್ಗಳ ವಿಶ್ವಕಪ್, ನಾವೂ ಚೆನ್ನಾಗಿ ಬ್ಯಾಟ್ ಮಾಡಿ ಯಾವುದೇ ತಂಡವನ್ನಾದ್ರು ಸೋಲಿಸಬಲ್ಲೆವು: ರಶೀದ್ ಖಾನ್