ಕೈರೋ: ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಮೊಹಮ್ಮದ್ ಸಲಾ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿರುವುದಾಗಿ ಈಜಿಪ್ಟ್ ಫುಟ್ಬಾಲ್ ಅಸೋಸಿಯೇಷನ್ (ಇಎಫ್ಎ) ಶುಕ್ರವಾರ ತಿಳಿಸಿದೆ.
ವೈದ್ಯಕೀಯ ಸ್ವ್ಯಾಬ್ ನಡೆಸಿದ ವೇಳೆ ನಮ್ಮ ರಾಷ್ಟ್ರೀಯ ಫುಟ್ಬಾಲ್ ತಂಡದ ಅಂತಾರಾಷ್ಟ್ರೀಯ ಆಟಗಾರ, ಲಿವರ್‌ಪೂಲ್ ತಾರೆ ಮೊಹಮ್ಮದ್ ಸಲಾಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅವರ ಕೋವಿಡ್-19 ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ಫುಟ್ಬಾಲ್ ಫೆಡರೇಶನ್ ತಿಳಿಸಿದೆ.
ಮೊಹಮ್ಮದ್ ಸಲಾಗೆ ಯಾವುದೇ ರೀತಿಯ ರೋಗ ಲಕ್ಷಣಗಳಿರಲಿಲ್ಲ. ತಂಡದ ಉಳಿದ ಆಟಗಾರರ ವರದಿ ನೆಗೆಟಿವ್ ಬಂದಿದೆ. ಸಲಾ ವೈದ್ಯರ ಸಲಹೆಯಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ ಎಂದು ಇಎಫ್ಎ ಅರೇಬಿಕ್ ಭಾಷೆಯಲ್ಲಿ ಹೇಳಿಕೆ ನೀಡಿದೆ.
ಈಜಿಪ್ಟ್ನಲ್ಲಿ ಆಫ್ರಿಕಾ ಕಪ್ ಆಫ್ ನೇಷನ್ಸ್ ಟೂರ್ನಿಗಳು ನಡೆಯುತ್ತಿದ್ದು ಅರ್ಹತಾ ಪಂದ್ಯದಲ್ಲಿ ಈಜಿಪ್ಟ್ ತಂಡವು ಟೋಗೊ ವಿರುದ್ಧ ಭಾನುವಾರ ಕಣಕ್ಕಿಳಿಯಲಿದೆ.