ಮಾಂಟೆ ಕಾರ್ಲೋ: ಪೋರ್ಚುಗಲ್‌ನ ಸ್ಟಾರ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು ತಮ್ಮ ದೊಡ್ಡ ಕನಸು ಎಂದು ಹೇಳಿದ್ದಾರೆ. ಕತಾರ್‌ನಲ್ಲಿ ನಡೆಯಲಿರುವ 2022 ರ ಫಿಫಾ ವಿಶ್ವಕಪ್ಅನ್ನು ಪೋರ್ಚುಗಲ್ ತಂಡ ಗೆಲ್ಲುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ರೊನಾಲ್ಡೊ ನೇತೃತ್ವದ ಪೋರ್ಚುಗೀಸ್ ತಂಡ ಫ್ರಾನ್ಸ್‌ನಲ್ಲಿ ನಡೆದ 2016ರ ಯುರೋ ಕಪ್ ಮೂಲಕ ತಮ್ಮ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದಿತ್ತು. ಇದರ ಬೆನ್ನಲ್ಲೇ 2019 ರಲ್ಲಿ ಯುಇಎಫ್‌ಎ ನೇಷನ್ಸ್ ಲೀಗ್‌ನ ಉದ್ಘಾಟನಾ ಆವೃತ್ತಿಯನ್ನು ಗೆಲ್ಲುವ ಮೂಲಕ ಭಾರಿ ಯಶಸ್ಸು ಸಾಧಿಸಿತ್ತು. ಹಾಗಾಗಿ ಮುಂದಿನ ವಿಶ್ವಕಪ್ನಲ್ಲೂ ಪೋರ್ಚುಗಲ್ ಪ್ರಾಬಲ್ಯ ಸಾಧಿಸಲಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
2022 ರಲ್ಲಿ ಪೋರ್ಚುಗಲ್ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಸಾಧ್ಯತೆಗಳ ಬಗ್ಗೆ ಮಾತನಾಡಿರುವ ಅವರು, " ನಾವು ಈಗಾಗಲೆ ಬಹಳ ವಿಶೇಷವಾದ ಯುರೋ ಕಪ್ ಗೆದ್ದಿದ್ದೇವೆ . ನಾವು 2016ರಲ್ಲಿ ಈ ಟೂರ್ನಿ ಗೆದ್ದಿರುವುದರಿಂದ ಮುಂಬರುವ 2022ರ ಫಿಫಾ ವಿಶ್ವಕಪ್ ಕೂಡ ಗೆಲ್ಲಲು ಬಯಸುತ್ತೇವೆ. ಇದು ನಮ್ಮಿಂದ ಖಂಡಿತ ಸಾಧ್ಯ, ಎಲ್ಲವೂ ಸಾಧ್ಯ. ಆದರೆ, ನೀವು ವಾಸ್ತವಿಕವಾಗಿರಬೇಕು".
ನಾನು ನಿಮಗೆ ಅನೇಕ ಬಾರಿ ಹೇಳಿದಂತೆ, ಪೋರ್ಚುಗಲ್ಗಾಗಿ ಏನನ್ನಾದರೂ(ವಿಶ್ವಕಪ್) ಗೆಲ್ಲುವುದು ನನ್ನ ಕನಸು . ಈಗಾಗಲೇ ನಾನು ಎರಡೂ ಕಪ್ಗಳನ್ನ ಗೆದ್ದಿರುವುದು (ಯುರೋ 2016 ಮತ್ತು 2018-19 ನೇಷನ್ಸ್ ಲೀಗ್) ಸಂತೋಷ ತಂದಿದೆ. ಅಲ್ಲದೇ ನಾನು ಆಡಿರುವ ಪ್ರತಿಯೊಂದು ಕ್ಲಬ್ ಪರವೂ ಟ್ರೋಫಿಗಳನ್ನು ಗೆದ್ದಿದ್ದೇನೆ. ಆದರೆ ವಿಶ್ವಕಪ್ ಗೆಲ್ಲುವುದು ನನ್ನ ಬಹುದೊಡ್ಡ ಕನಸು, ಅದೊಂದು ಕನಸು" ಎಂದಿದ್ದಾರೆ.
ವಿಶ್ವ ಫುಟ್ಬಾಲ್ ಜಗತ್ತಿನಲ್ಲಿ ಪ್ರಸಿದ್ಧ ಆಟಗಾರನಾಗಿರುವ ರೊನಾಲ್ಡೊಗೆ 36 ವರ್ಷವಾಗಿದೆ. 2022ರಲ್ಲಿ ಕತಾರ್‌ನಲ್ಲಿ ನಡೆಯುವ ವಿಶ್ವಕಪ್ ಅವರ ಪಾಲಿಗೆ ಕೊನೆಯದಾಗಲಿದೆ.