ಬೆಂಗಳೂರು: ರಾಜ್ಯದಲ್ಲಿ ಫುಟ್ಬಾಲ್ ಫೀವರ್ ಜೋರಾಗಿದೆ. ಎಲ್ಲೆಲ್ಲೂ ಬಿಎಫ್ಸಿ ಗುಂಗು. ಕನ್ನಡದ ಕಂಪು ಹರಡುತ್ತ ಬೆಂಗಳೂರಿಗರ ಮನಸ್ಸು ಗೆದ್ದಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ಆಟಗಾರರು ಅಭಿಮಾನಿಗಳ ಜೊತೆ ಫುಟ್ಬಾಲ್ ಆಡಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.
ಖಾಸಗಿ ಮಾಲ್ ಒಂದರಲ್ಲಿ BFC ಆಟಗಾರರಾದ ಸುನಿಲ್ ಚೆಟ್ರಿ, ಗುರ್‌ಪ್ರೀತ್ ಸಿಂಗ್ ಸಂಧು, ರಾಫೆಲ್ ಅಗಸ್ಟೊ, ಶೂಟೌಟ್ ಎಂಬ ಪೆನಾಲ್ಟಿ ಗೋಲ್ ಬಾರಿಸುವ ಆಟದಲ್ಲಿ ಅಭಿಮಾನಿಗಳ ಜೊತೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು. ಈ ಕಾರ್ಯಕ್ರಮದ ಮೂಲಕ ಕಿಂಗ್‌ಫಿಶರ್ ಫುಟ್ಬಾಲ್ ಅಭಿಮಾನಿಗಳು ಕನಸನ್ನು ನನಸಾಗಿಸಿದೆ.
ಫುಟ್ಬಾಲ್ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನ ನೋಡುವುದಲ್ಲದೇ ಅವರ ಜೊತೆ ಆಟವಾಡಿ ಮುಂದಿನ ಪಂದ್ಯಗಳ ಟಿಕೆಟ್ ಜೊತೆ ಆಟಗಾರರೊಂದಿಗೆ ಡಿನ್ನರ್ ಮಾಡುವ ಅವಕಾಶ ಪಡೆದು ಖುಷಿಪಟ್ಟರು.
ಇನ್ನು ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸುನಿಲ್ ಚೆಟ್ರಿ, ನನಗೆ ಆ ದಾಖಲೆ ಮುರಿಯಬೇಕು, ಈ ದಾಖಲೆ ಮಾಡಬೇಕು ಎಂಬ ಯಾವ ಆಸೆಗಳಿಲ್ಲ. ಶಕ್ತಿ ಇರುವಷ್ಟು ದಿನ ದೇಶಕ್ಕಾಗಿ ಆಡುತ್ತೇನೆ ದೇಶವನ್ನು ಪ್ರತಿನಿಧಿಸುತ್ತೇನೆ. ಭಾರತ ತಂಡವನ್ನು ಪ್ರತಿನಿಧಿಸುವ ಪ್ರತಿಯೊಂದು ಕ್ರೀಡೆಗಳಿಗೂ ಮಹತ್ವ ಸಿಗಬೇಕು, ಭಾರತಕ್ಕೆ ಹೆಸರು ಬರಬೇಕು ಎಂದರು.
ನಂತರ ಮಾತನಾಡುತ್ತ ನನಗೆ ಬೆಂಗಳೂರು ಮನೆ ಇದ್ದಂತೆ, ಆರೇಳು ವರ್ಷದಿಂದ ಬೆಂಗಳೂರಿಗರು ತೋರಿಸಿದ ಪ್ರೀತಿಗೆ ನಾನು ಚಿರಋಣಿ. ಎಂದು ಕನ್ನಡದಲ್ಲೇ 'ನಮ್ಮ ಊರು ಬೆಂಗಳೂರು', ಯಾವಾಗಲೂ ನನ್ನ ತವರಿದ್ದಂತೆ ಎಂದು ಹೇಳುವ ಮೂಲಕ ಇನ್ನಷ್ಟು ಕನ್ನಡಿಗರ ಮನ ಗೆದ್ದರು.