ಮುಂಬೈ: ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಂತಹ ಬಲಿಷ್ಠ ತಂಡಗಳ ನಡುವೆ ಕ್ರಿಕೆಟ್ಗೆ ಆಗಷ್ಟೇ ಕಾಲಿಟ್ಟಿದ್ದ ಕ್ರಿಕೆಟ್ ಶಿಶು ಭಾರತ ತಂಡ 1983ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಈ ಮೂಲಕ ಕ್ರಿಕೆಟ್ ಜಗತ್ತಿಗೆ ತನ್ನ ದಿಟ್ಟ ಹೆಜ್ಜೆಯನ್ನಿಟ್ಟಿತ್ತು. ಮಾತ್ರವಲ್ಲದೆ ಭವಿಷ್ಯದಲ್ಲಿ ಯುವಕರು ಕ್ರಿಕೆಟ್ ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ನೀಡಿತು.
ಆ ಟೂರ್ನಿಯಲ್ಲಿ ನಾಯಕರಾಗಿದ್ದ ಕಪಿಲ್ ದೇವ್ ಜಿಂಬಾಬ್ವೆ ವಿರುದ್ಧ ಸಿಡಿಸಿದ್ದ 175 ರನ್ಗಳು, ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್ ಎಂದೇ ಪರಿಗಣಿಸಲಾಗಿದೆ. ಅದೊಂದು ಇನ್ನಿಂಗ್ಸ್ ಭಾರತೀಯರ ಪಾಲಿಗೆ ಇಂದಿಗೂ ಅವಿಸ್ಮರಣೀಯವಾಗಿ ಉಳಿದುಕೊಂಡಿದೆ.
1983 ಜೂನ್ 18 ರಂದು ವಿಶ್ವಕಪ್ ಲೀಗ್ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ತಂಡವನ್ನು ಎದುರಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ಕೇವಲ 17 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆ ಸಂದರ್ಭದಲ್ಲಿ ಆಪತ್ಪಾಂದವನಾಗಿ ಬಂದ ನಾಯಕ ಕಪಿಲ್ ದೇವ್ ಜಿಂಬಾಬ್ವೆ ಬೌಲರ್ಗಳನ್ನು ಏಕಾಂಗಿಯಾಗಿ ಎದುರಿಸಿದರಲ್ಲದೇ ಮನ ಬಂದಂತೆ ದಂಡಿಸಿ ಭರ್ಜರಿ ಶತಕ ಸಿಡಿಸಿದ್ದರು.
138 ಎಸೆತಗಳನ್ನು ಎದುರಿಸಿ ಅಜೇಯ 175 ರನ್ಗಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ರನ್ಗಳಿಸಿದ ದಾಖಲೆಯನ್ನು ದಶಕಗಳ ಕಾಲ ತಮ್ಮ ಹೆಸರಿನಲ್ಲೇ ಉಳಿಸಿಕೊಂಡಿದ್ದರು. ಅವರ ಈ ಇನ್ನಿಂಗ್ಸ್ನಲ್ಲಿ 16 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ಗಳು ಕೂಡ ಇದ್ದವು.
ಸೆಮಿಫೈನಲ್ ಪ್ರವೇಶಿಸಲು ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಕಪಿಲ್ ದೇವ್ ಅವರ ಏಕಾಂಗಿ ಹೋರಾಟದ ನೆರವಿನಿಂದ ಭಾರತ 60 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 266 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ 57 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 235 ರನ್ ಬಾರಿಸಿ 31 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಕಪಿಲ್ ದೇವ್ ಪಂದ್ಯಶ್ರೇಷ್ಠರೆನಿಸಿದ್ದರು.
ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು 6 ವಿಕೆಟ್ಗಳಿಂದ ಬಗ್ಗು ಬಡಿದು ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಫೈನಲ್ನಲ್ಲಿ ಹಿಂದಿನ 2 ವಿಶ್ವಕಪ್ಗಳಲ್ಲಿ ಚಾಂಪಿಯನ್ ಆಗಿ ಹ್ಯಾಟ್ರಿಕ್ ಕನಸಿನಲ್ಲಿದ್ದ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು 43 ರನ್‌ಗಳಿಂದ ಮಣಿಸಿ ಚೊಚ್ಚಲ ವಿಶ್ವ ಕಿರೀಟ ಎತ್ತಿ ಹಿಡಿದಿತ್ತು.