ನವದೆಹಲಿ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ದಾಖಲೆಯ ಏಳನೇ ಬಾರಿ ಚಾಂಪಿಯನ್ ಆಗುವತ್ತ ಟೀಂ ಇಂಡಿಯಾ ಕಣ್ಣಿಟ್ಟಿದೆ.
ಈ ಪಂದ್ಯ ಬಾಂಗ್ಲಾದೇಶದ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 1:00 ಗಂಟೆಗೆ ನಡೆಯಲಿದೆ. ಭಾರತ ತಂಡ ಥಾಯ್ಲೆಂಡ್ ಅನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ, ಶ್ರೀಲಂಕಾ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತದ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲು ಸಜ್ಜಾಗಿದೆ.
ಪುರುಷರ ದಾಖಲೆ ಸರಿಗಟ್ಟಲು ಕಣ್ಣಿಟ್ಟ ಮಹಿಳಾ ತಂಡ : ಭಾರತ ಮಹಿಳಾ ತಂಡ ಶ್ರೀಲಂಕಾವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಅದು ಭಾರತೀಯ ಪುರುಷರ ತಂಡಕ್ಕೂ ಸರಿಸಮವಾಗಲಿದೆ. ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಎಂದರೆ 7 ಬಾರಿ ಪ್ರಶಸ್ತಿ ಗೆದ್ದ ಎಂಬ ಖ್ಯಾತಿ ಭಾರತ ತಂಡ ಪಡೆಯಲಿದೆ.
ಉತ್ತಮ ಫಾರ್ಮ್‌ನಲ್ಲಿದ್ದಾರೆ ಜೆಮಿಮಾ ರಾಡ್ರಿಗಸ್: ಗಾಯದಿಂದ ವಾಪಸ್ ಆಗಿರುವ ಜೆಮಿಮಾ ರಾಡ್ರಿಗಸ್ ಈ ಟೂರ್ನಿಯಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ್ದರೆ, 25ರ ಹರೆಯದ ದೀಪ್ತಿ ಶರ್ಮಾ 94 ರನ್ ನೀಡಿ 13 ವಿಕೆಟ್ ಪಡೆದಿದ್ದಾರೆ.
ನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರಸಕ್ತ ಟೂರ್ನಿಯಲ್ಲಿ ಕೇವಲ 4 ಪಂದ್ಯಗಳನ್ನು ಆಡಿದ್ದು, 72 ಎಸೆತಗಳಲ್ಲಿ 81 ರನ್ ಗಳಿಸಿದ್ದಾರೆ. 3 ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಅನುಭವಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕೂಡ ಒಂದು ಪಂದ್ಯದಿಂದ ಹೊರಗುಳಿದಿದ್ದರು.
14 ವರ್ಷಗಳ ನಂತರ ಪ್ರಶಸ್ತಿ ಪಂದ್ಯಕ್ಕೆ ಶ್ರೀಲಂಕಾ ಲಗ್ಗೆ: ಫೈನಲ್ ಪಂದ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸಲಿದೆ. ಏಕೆಂದರೆ ಶ್ರೀಲಂಕಾದ ಆಟಗಾರ್ತಿ ರಣಸಿಂಗ್ ಮಾತ್ರ 100 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ ಇನ್ನಿಬ್ಬರು ಆಟಗಾರ್ತಿಗಳಾದ ಹರ್ಷಿತಾ ಮಾದವಿ (201 ರನ್) ಮತ್ತು ನೀಲಾಕ್ಷಿ ಡಿ ಸಿಲ್ವಾ (124 ರನ್) ಮಾತ್ರ ಈ ಟೂರ್ನಿಯಲ್ಲಿ 100ಕ್ಕೂ ಹೆಚ್ಚು ರನ್ಗಳನ್ನು ಕಲೆ ಹಾಕಿದ್ದಾರೆ. ಭಾರತ ತಂಡ ಸತತ ಎಂಟನೇ ಬಾರಿ ಫೈನಲ್ ತಲುಪಿದ್ದು, ಶ್ರೀಲಂಕಾ 14 ವರ್ಷಗಳ ನಂತರ ಪ್ರಶಸ್ತಿ ಪಂದ್ಯಕ್ಕೆ ಲಗ್ಗೆ ಇಟ್ಟಿದೆ.
ಶ್ರೀಲಂಕಾ ವಿರುದ್ಧ 17 ಪಂದ್ಯಗಳನ್ನು ಗೆದ್ದಿರುವ ಭಾರತ: ಎರಡೂ ತಂಡಗಳು ಟಿ- 20ಯಲ್ಲಿ 22 ಬಾರಿ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ 17 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ. ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 3 ಪಂದ್ಯಗಳನ್ನು ಗೆದ್ದಿದೆ.
ಎರಡೂ ತಂಡಗಳು ಈ ಕೆಳಗಿನಂತಿವೆ: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಎಸ್ ಮೇಘನಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (WK), ಡೇಲಾನ್ ಹೇಮಲತಾ, ಸ್ನೇಹ ರಾಣಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ರೇಣುಕಾ ಠಾಕೂರ್, ಮೇಘನಾ ಸಿಂಗ್ ಮತ್ತು ಕಿರಣ್‌ಗಿರೆ ಪೂಜಾ ವಸ್ತ್ರಕರ್.
ಶ್ರೀಲಂಕಾ: ಚಾಮರಿ ಅಟಪಟ್ಟು (ನಾಯಕ), ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಅಚಿನಿ ಕುಲಸೂರಿಯಾ, ಸುಗಂಧಾ ಕುಮಾರಿ, ಹರ್ಷಿತಾ ಸಮರವಿಕ್ರಮ, ಮಧುಸಿಕಾ ಮೆತ್ತಾನಂದ, ಹಾಸಿನಿ ಪೆರೇರಾ, ಓಡಾಡಿ ರಣಸಿಂಘೆ, ಇನೋಕಾ ರಣವೀರಾ, ಅನೌಷ್ಕಾ ಸಂಜೀವನಿ, ಕೌಶನಿ ನುತ್ಯಂಗನಾ, ಕೌಶನಿ ನುತಿಯಾಂಗ್.