ಅಹ್ಮದಾಬಾದ್ : ಅಪ್ರತಿಮ ಎಂಎಸ್ ಧೋನಿ ಅವರ ಅಂತಾರಾಷ್ಟ್ರೀಯ ನಿವೃತ್ತಿಯ ನಂತರ ಭಾರತ ತಂಡ ಒಬ್ಬ ಫಿನಿಷರ್ನನ್ನು ಹುಡುಕಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ವರ್ಷ ನಡೆಯುವ ಏಕದಿನ ವಿಶ್ವಕಪ್ ವೇಳೆಗೆ ನಾವು ಒಬ್ಬ ಫಿನಿಷರ್ನನ್ನು ಕಂಡುಕೊಳ್ಳುತ್ತೇವೆ ಎಂಬ ಭರವಸೆಯಿದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಭಾನುವಾರದಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮೊದಲ ಬಾರಿಗೆ ಅಧಿಕೃತ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ನಾಳಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ರೋಹಿತ್ಗೆ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಜಡೇಜಾ ಅಲ್ಲದೆ ಮತ್ತಷ್ಟು ಗೇಮ್ ಫಿನಿಷರ್ಗಳ ಅಗತ್ಯವಿದೆ ಎಂದಿದ್ದಾರೆ.
ಏಕದಿನ ಕ್ರಿಕೆಟ್ಗೆ ಫಿನಿಷರ್ ಪಾತ್ರ ಪ್ರಮುಖವಾಗಿರುತ್ತದೆ. ಆದರೆ, ಎಂಎಸ್ ಧೋನಿ ನಿವೃತ್ತಿಯ ನಂತರ ನಾವು ಆ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸುವ ಆಟಗಾರನನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ವಿಶ್ವಕಪ್ ವೇಳೆ ಒಬ್ಬ ಸಮರ್ಥ ಫಿನಿಷರ್ನನ್ನು ಕಂಡುಕೊಳ್ಳುತ್ತೇವೆಂಬ ಭರವಸೆಯಿದೆ ಎಂದು ರೋಹಿತ್ ತಿಳಿಸಿದ್ದಾರೆ.
"ನಾವು ಹಾರ್ದಿಕ್ ಪಾಂಡ್ಯರನ್ನು ಪ್ರಯತ್ನಿಸಿದ್ದೇವೆ. ಜಡೇಜಾ ಕೂಡ ಉತ್ತಮವಾಗಿ ಆಡಿದ್ದಾರೆ. ಆದರೆ, ಆ ಜಾಗಕ್ಕೆ ನಾವು ಹೆಚ್ಚಿನ ಆಯ್ಕೆಗಳನ್ನು ಸೃಷ್ಟಿಸಬೇಕಿದೆ. ಈ ಸರಣಿಯಲ್ಲಿ ಅವಕಾಶ ಪಡೆದಿರುವ ಹುಡುಗರು, ತಮಗೆ ಸಿಕ್ಕಿರುವ ಆ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ತಂಡದಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಳ್ಳಲಿದ್ದಾರೆ ಎಂಬ ಭರವಸೆಯಿದೆ" ಎಂದು ಭಾರತ ತಂಡದ ನಾಯಕ ಹೇಳಿದ್ದಾರೆ.
ಇದನ್ನೂ ಓದಿ:ನಿವೃತ್ತಿ ಘೋಷಿಸಿ ಹತಾಶನಾಗಿದ್ದ ನನಗೆ ಮತ್ತೆ ಕ್ರಿಕೆಟ್ಗೆ ಮರಳಲು ಸಿಎಸ್ಕೆ-ಧೋನಿ ಕಾರಣ : ಅಂಬಾಟಿ ರಾಯುಡು