ಮುಂಬೈ: ಆಗಸ್ಟ್ 18ರಿಂದ ಜಿಂಬಾಬ್ವೆ ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳಿಗೆ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ತಿಳಿಸಿದ್ದಾರೆ.
ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.ತಂಡದ ಬೌಲಿಂಗ್ ಹಾಗೂ ಬ್ಯಾಟಿಂಗ್ ಕೋಚ್ಗಳಿಗೂ ವಿಶ್ರಾಂತಿ ನೀಡಲಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಹಂಗಾಮಿ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆಂದು ಅವರು ಖಚಿತಪಡಿಸಿದ್ದಾರೆ.
ಜಿಂಬಾಬ್ವೆಯ ಹರಾರೆಯಲ್ಲಿ ಆಗಸ್ಟ್ 18, 20 ಮತ್ತು 22 ರಂದು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಏಷ್ಯಾಕಪ್ನ ಭಾಗವಾಗಿರುವ ಕೆ ಎಲ್ ರಾಹುಲ್ ಮತ್ತು ದೀಪಕ್ ಹೂಡಾ ಮಾತ್ರ ಈ ತಂಡದಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧ ಸರಣಿ ಮುಗಿಯುತ್ತಿದ್ದಂತೆ ಅವರು ನೇರವಾಗಿ ದುಬೈಗೆ ಹಾರಲಿದ್ದಾರೆ.
ಈಗಾಗಲೇ ಟೀಂ ಇಂಡಿಯಾ ಕೋಚ್ ಆಗಿ ವಿವಿಎಸ್ ಲಕ್ಷ್ಮಣ ಸೇವೆ ಸಲ್ಲಿಸಿದ್ದಾರೆ. ಕಳೆದ ಜೂನ್- ಜುಲೈ ತಿಂಗಳಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಐರ್ಲೆಂಡ್ ವಿರುದ್ಧ ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ ಕಣಕ್ಕಿಳಿದಾಗ ಲಕ್ಷ್ಮಣ್ ಕೋಚ್ ಆಗಿದ್ದರು.
ಆಗಸ್ಟ್ 20ರಂದು ಪ್ರಯಾಣ: ದುಬೈನಲ್ಲಿ ಆಯೋಜನೆಗೊಂಡಿರುವ ಟೂರ್ನಿಯಲ್ಲಿ ಭಾಗಿಯಾಗಲು ಟೀಂ ಇಂಡಿಯಾ ಹಾಗೂ ಸಹಾಯಕ ಸಿಬ್ಬಂದಿ ಆಗಸ್ಟ್ 20ರಂದು ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಜಯ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಆಡಲು ಸಜ್ಜಾದ ರಾಹುಲ್: ನಾಯಕತ್ವ ಸ್ಥಾನ ಬಿಟ್ಟುಕೊಟ್ಟ ಶಿಖರ್
ಏಷ್ಯಾಕಪ್ ದೃಷ್ಟಿಯಿಂದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ಗೆ ಜಿಂಬಾಬ್ವೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಮೂರು ಏಕದಿನ ಪಂದ್ಯಗಳಲ್ಲಿ ರಾಹುಲ್ ನಾಯಕನಾಗಿದ್ದು, ಶಿಖರ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.