ದುಬೈ: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಮತ್ತು ಧೋನಿ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದು, ಮಾಹಿ ಭಾಯ್ ಅವರನ್ನು ನಾನು ಕ್ರಿಕೆಟ್ನ ಶ್ರೇಷ್ಠ ಆಟಗಾರನಾಗಿ ಮಾತ್ರ ನೋಡುವುದಿಲ್ಲ, ಬದಲಾಗಿ ನನ್ನ ಸ್ವಂತ ಸಹೋದರನಾಗಿ ಕಾಣುತ್ತೇನೆ. ಮುಂಬರುವ ವಿಶ್ವಕಪ್ನಲ್ಲಿ ಧೋನಿ ನನಗೆ ಪ್ರೋತ್ಸಾಹ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ಧೋನಿ ನಡುವೆ ಅವಿನಾಭಾವ ಸಂಬಂಧವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಧೋನಿ ಜನ್ಮದಿನದ ಸಂದರ್ಭದಲ್ಲಿ ರಾಂಚಿಗೆ ಭೇಟಿ ನೀಡಿದ್ದರು. ಅಲ್ಲದೇ ಧೋನಿ ಕುಟುಂಬದ ಜೊತೆ ಹಲವಾರು ಸಮಯ ಕಳೆದಿದ್ದಾರೆ.
ಅದಕ್ಕೂ ಮಿಗಿಲಾಗಿದ್ದೆಂದರೆ 2016ರಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡದಲ್ಲಿ ಒಬ್ಬ ಪ್ರತಿಭಾನ್ವಿತ ಆಲ್ರೌಂಡರ್ ಆಗಿ ರೂಪುಗೊಂಡಿದ್ದು, ಧೋನಿ ನಾಯಕತ್ವದಲ್ಲೇ. ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ವಿವಾದಕ್ಕೀಡಾಗಿ ಕುಗ್ಗಿದ್ದ ಸಂದರ್ಭದಲ್ಲಿ ಧೋನಿ ತಮ್ಮ ನೆರವಿಗೆ ನಿಂತು, ಪ್ರೋತ್ಸಾಹ ನೀಡಿದರು. ಅದೇ ರೀತಿ ಈಗಲೂ ಅವರೂ ನನಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ.
ಅವರ ಕೊರತೆಯಲ್ಲಿ ಭಾರತ ಮೊದಲ ವಿಶ್ವಕಪ್ ಆಡುತ್ತಿದ್ದು, ನನ್ನ ಮೇಲಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಲು ಅವರ ನನಗೆ ಹೆಗಲುಕೊಡಲಿದ್ದಾರೆ ಎಂದು ಹಾರ್ದಿಕ್ ಇಎಸ್ಪಿಎನ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅವರು(ಧೋನಿ) ನನ್ನ ವೃತ್ತಿ ಜೀವನದ ಆರಂಭದಿಂದಲೂ ಚೆನ್ನಾಗಿ ಅರ್ಥಮಾಡಿಕೊಂಡಿರುವವರಲ್ಲಿ ಒಬ್ಬರು. ನಾನು ಹೇಗೆ ಕಾರ್ಯನಿರ್ವಹಿಸುತ್ತೇನೆ, ನಾನು ಎಂತಹ ವ್ಯಕ್ತಿ, ನನಗೆ ಇಷ್ಟವಾಗದಿರುವ ವಿಷಯಗಳೇನು, ಪ್ರತಿಯೊಂದು ಧೋನಿ ಭಾಯ್ಗೆ ತಿಳಿದಿದೆ.
ಅವರೂ ನನ್ನ ಆಳವಾಗಿ ತಿಳಿದಿದ್ದಾರೆ. ನಾನು ಅವರೊಂದಿಗೆ ತುಂಬಾ ಹತ್ತಿರದವನಾಗಿದ್ದೇನೆ. ಅವರೊಬ್ಬರೆ ನನ್ನನ್ನು ತಾಳ್ಮೆಯಿಂದ ಇರುವಂತೆ ಮಾಡಲು ಸಾಧ್ಯ. ನಾನು ಕಷ್ಟದಲ್ಲಿದ್ದಾಗ(ಟಿವಿ ಕಾರ್ಯಕ್ರಮದಲ್ಲಿ ವಿವಾದಕ್ಕೆ ಸಿಲುಕಿದ್ದಾಗ) ನನಗೆ ಬೆಂಬಲದ ಅಗತ್ಯವಿದೆ ಎಂದು ಅವರು ಅರಿತುಕೊಂಡು ಧಾವಿಸಿದ್ದರು.
ನನ್ನ ಕ್ರಿಕೆಟ್ ವೃತ್ತಿ ಜೀವದ ಕಷ್ಟವನ್ನು ಎದುರಿಸಿದಾಗ ಹೆಗಲು ಕೊಡುವವರ ಅಗತ್ಯವಿದೆ ಎನಿಸಿದಾಗಲೆಲ್ಲಾ ಅವರು ನನ್ನ ನೆರವಿಗೆ ಬಂದಿದ್ದಾರೆ. ಹಾಗಾಗಿ ನಾನು ಯಾವತ್ತೂ ಅವರನ್ನು ಒಬ್ಬ ಶ್ರೇಷ್ಠ ಕ್ರಿಕೆಟಿಗ ಎಂದು ನೋಡಿಲ್ಲ, ಅವರೂ ನನಗೆ ಸ್ವಂತ ಅಣ್ಣನ ಹಾಗೆ. ನಾನು ಅವರನ್ನೂ ಗೌರವಿಸುತ್ತೇನೆ ಎಂದು ಪಾಂಡ್ಯ ಹೇಳಿದ್ದಾರೆ.
ಇದನ್ನು ಓದಿ:ಟಿ20 ವಿಶ್ವಕಪ್: ದುಬೈನಲ್ಲಿ ಭಾರತ ತಂಡ ಸೇರಿಕೊಂಡ ಮೆಂಟರ್ ಮಹೇಂದ್ರ ಸಿಂಗ್ ಧೋನಿ