ಮೆಲ್ಬೋರ್ನ್(ಆಸ್ಟ್ರೇಲಿಯಾ): ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ನಡೆದ ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆಯನ್ನು 71 ರನ್‌ಗಳ ಅಂತರದಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೀಗ ಇಂಗ್ಲೆಂಡ್ ಜತೆ ಸೆಮಿಫೈನಲ್ ಕಾದಾಟಕ್ಕೆ ರೋಹಿತ್ ಬಳಗ ಸಿದ್ಧತೆ ನಡೆಸುತ್ತಿದೆ.
ವಿರಾಟ್ ಕೊಹ್ಲಿ 5 ಪಂದ್ಯದಲ್ಲಿ 246 ರನ್ ಗಳಿಸುವ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿ ಮುಂಚೂಣಿ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಟೂರ್ನಿಯಲ್ಲಿ 223 ರನ್ ಗಳಿಸಿದ್ದಾರೆ. ಈ ವರ್ಷ 1,200 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಅವರು ಅಂತಾರಾಷ್ಟ್ರೀಯ ಟಿ20ಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಕೂಡಾ 25 ಎಸೆತಗಳಲ್ಲಿ 61ರನ್ ಬಾರಿಸಿದರು.
ಇನ್ನು ಬೌಲಿಂಗ್ ವಿಭಾಗದಲ್ಲೂ ವೇಗಿಗಳು ನಿರೀಕ್ಷಿತ ಪ್ರದರ್ಶನ ನೀಡುತ್ತಿದ್ದಾರೆ. ಎಡಗೈ ವೇಗಿ ಅರ್ಶ್‌ದೀಪ್ 5 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದು ಭಾರತದ ಪರವಾಗಿ ಅತಿಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ. ಶ್ರೀಲಂಕಾದ ಬೌಲರ್ ವನಿಂದು ಹಸರಂಗ 15 ವಿಕೆಟ್ ಪಡೆದುಕೊಂಡು ವಿಶ್ವಕಪ್ ಅತಿ ಹೆಚ್ಚು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. (ಅರ್ಹತಾ ಪಂದ್ಯಗಳೂ ಸೇರಿ).
ಅಕ್ಸರ್ ಪಟೇಲ್ ಪ್ರಸ್ತುತ ವಿಶ್ವಕಪ್‌ನಲ್ಲಿ 4 ಪಂದ್ಯಗಳನ್ನಾಡಿದ್ದು ಕೇವಲ 3 ವಿಕೆಟ್ ಪಡೆದು ದುಬಾರಿಯಾಗಿದ್ದಾರೆ. ಮತ್ತು ಬ್ಯಾಟಿಂಗ್‌ನಲ್ಲೂ ಸಹ ಯಶಸ್ಸು ಕಂಡಿಲ್ಲ. ಹಾಗಾಗಿ, ಮುಂದಿನ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸ್ಪಿನ್ನರ್ ಚಹಲ್ ಅವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಯಾವುದೇ ಅವಕಾಶವಿದೆಯೇ ಎಂದು ದ್ರಾವಿಡ್ ಅವರನ್ನು ಕೇಳಿದಾಗ, ತಕ್ಷಣಕ್ಕೆ ಚಹಲ್ ಸೇರ್ಪಡೆಯನ್ನು ತಳ್ಳಿಹಾಕದ ಅವರು, ಟ್ರ್ಯಾಕ್‌ಗಳು ನಿಧಾನಗತಿಯಲಿವೆ. ಚೆಂಡು ಸ್ವಲ್ಪ ಮಾತ್ರ ತಿರುವು ಪಡೆದುಕೊಳ್ಳುತ್ತದೆ ಮತ್ತು ಅಡಿಲೇಡ್ ಸಂಪೂರ್ಣವಾಗಿ ವಿಭಿನ್ನ ರೀತಿಯ ಪಿಚ್ ಆಗಿದೆ. ಈ ಹಿಂದೆ ಬಾಂಗ್ಲಾದೇಶದ ವಿರುದ್ಧ ಆಡಿದ ಪಂದ್ಯದಲ್ಲಿ ಬಾಲ್ ಹೆಚ್ಚು ಸ್ಪಿನ್ ಆಗುತ್ತಿರಲಿಲ್ಲ. ಪಿಚ್ ಹೇಗಿರುತ್ತದೆ ಎಂಬುದರ ಮೇಲೆ ತಂಡದ ಆಯ್ಕೆ ಮಾಡಲಾಗುತ್ತದೆ" ಎಂದರು.
ಅಡಿಲೇಡ್ ಪಿಚ್ ಬ್ಯಾಟಿಂಗ್ ಮಾಡಲು ಹೆಚ್ಚು ಉಪಯುಕ್ತ. ಪ್ರಸಕ್ತ ವಿಶ್ವಕಪ್‌ಗೆ ಮಳೆಯ ಅಡಚಣೆ ಇರುವುದರಿಂದ ಪಿಚ್ ಒದ್ದೆಯಾದರೆ ಬ್ಯಾಟ್ ಬೀಸಲು ಕಷ್ಟವಾಗಲಿದೆ. ವೇಗಿಗಳಿಗೆ ಹೆಚ್ಚು ನೆರವು ನೀಡಲಿದೆ.
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ ಆಕರ್ಷಕ ಸಿಕ್ಸರ್‌ಗೆ ಕ್ರಿಕೆಟ್ ಲೋಕ ಮಂತ್ರಮುಗ್ಧ! ವಿಡಿಯೋ