ನವದೆಹಲಿ: 2022-23ರ ಋತುವಿನ ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿಯಿಂದ ಅನುಭವಿ ಆಟಗಾರರಾದ ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಹಾಗೂ ವೃದ್ಧಿಮಾನ್ ಸಹಾ ಅವರನ್ನು ಕೈಬಿಡುವ ಸಾಧ್ಯತೆಯಿದೆ. ಅಲ್ಲದೇ, ಭವಿಷ್ಯದ ನಾಯಕ ಎಂದೇ ಬಿಂಬಿತರಾಗುತ್ತಿರುವ ಹಾರ್ದಿಕ್ ಪಾಂಡ್ಯ, ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ಮತ್ತು ಯುವ ಆಟಗಾರ ಶುಭಮನ್ ಗಿಲ್ ಅವರು ಬಡ್ತಿ ಹೊಂದಲಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 21ರಂದು ನಡೆಯುವ ಬಿಸಿಸಿಐ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಅಂತಿಮವಾಗಲಿದೆ ಎನ್ನಲಾಗುತ್ತಿದೆ. ಭವಿಷ್ಯದ ಟಿ-20 ನಾಯಕ ಹಾರ್ದಿಕ್ ಪಾಂಡ್ಯ ಸಿ ಯಿಂದ ಬಿ ಗ್ರೂಪ್‌ಗೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ಮಾಹಿತಿ ಪ್ರಕಾರ ಕಳೆದೊಂದು ವರ್ಷದಿಂದ ಅದ್ಭುತ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ಗೆ ಬಂಪರ್ ಒಲಿಯುವ ಸಾಧ್ಯತೆಯಿದೆ.
ಅಲ್ಲದೇ, ಶುಭಮನ್ ಗಿಲ್ ಈಗ ಎರಡು ಫಾರ್ಮ್ಯಾಟ್ ಆಡುತ್ತಿರುವುದರಿಂದ ಗ್ರೂಪ್ 'ಸಿ'ನಿಂದ 'ಬಿ'ಗೆ ಬಡ್ತಿ ಹೊಂದುವ ನಿರೀಕ್ಷೆಯಿದೆ. ಪಿಟಿಐ ವರದಿಯ ಪ್ರಕಾರ, ಮಂಡಳಿಯ ಸಭೆಯಲ್ಲಿ ಅನೇಕ ಆಟಗಾರರ ಬಡ್ತಿ ಮತ್ತು ಹಿಂಬಡ್ತಿ ಸೇರಿದಂತೆ ವಿವಿಧ ಕಾರ್ಯಸೂಚಿ ಬಗ್ಗೆ ಚರ್ಚೆ ನಡೆಯಲಿದೆ.
ಮತ್ತೊಂದೆಡೆ, ಇತ್ತೀಚೆಗೆ ತಂಡದಿಂದ ಹೊರಬಿದ್ದಿರುವ ವೇಗಿ ಇಶಾಂತ್ ಶರ್ಮಾ, ಮಾಜಿ ಉಪ ನಾಯಕ ರಹಾನೆ ಮತ್ತು ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರನ್ನು ಪಟ್ಟಿಯಿಂದ ಕೈಬಿಡಬಹುದು. ಬಿಸಿಸಿಐ ಕೇಂದ್ರೀಯ ಗುತ್ತಿಗೆಗಳಲ್ಲಿ ನಾಲ್ಕು ವಿಭಾಗಗಳಿವೆ. A+ ಒಪ್ಪಂದದ ಪ್ರಕಾರ ವಾರ್ಷಿಕ 7 ಕೋಟಿ, ಗ್ರೂಪ್ A ಆದರೆ 5 ಕೋಟಿ, ಗ್ರೂಪ್ B ಎಂದರೆ 3 ಕೋಟಿ ಮತ್ತು C ಗ್ರೂಪ್ ಕ್ರಿಕೆಟಿಗರಿಗೆ 1 ಕೋಟಿ ವಾರ್ಷಿಕ ಸಂಭಾವನೆ ನಿಗದಿಪಡಿಸಲಾಗಿದೆ.
A+ ಮತ್ತು A ವಿಭಾಗದ ಆಟಗಾರರು ಎಲ್ಲ ಮಾದರಿಯಲ್ಲೂ ನಿರಂತರವಾಗಿ ಅಥವಾ ಎರಡು ವೈಟ್-ಬಾಲ್ ಮಾದರಿ ಹಾಗೂ ಕೆಲ ಟೆಸ್ಟ್ ಪಂದ್ಯಗಳಲ್ಲಾದರೂ ಆಡುವಂತವರಾಗಿದ್ದಾರೆ. ಗ್ರೂಪ್ ಬಿ ಕ್ರಿಕೆಟಿಗ ಕನಿಷ್ಠ ಎರಡು ಫಾರ್ಮ್ಯಾಟ್ ಆಡಬೇಕಾಗುತ್ತದೆ. ಸಿ ಗುಂಪು ಪ್ರಾಥಮಿಕವಾಗಿ ಏಕಮಾತ್ರ ಫಾರ್ಮ್ಯಾಟ್ ಆಟಗಾರರಿಗೆ ಸೀಮಿತವಾಗಿದೆ. ಅಲ್ಲದೆ, ಈ ಪಟ್ಟಿಗೆ ಸೇರ್ಪಡೆಗೊಳ್ಳಲು ನಿರ್ದಿಷ್ಟ ಸಂಖ್ಯೆಯ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕು. ಅಲ್ಲದೆ, ಪ್ರದರ್ಶನ ಹಾಗೂ ಐಸಿಸಿ ಶ್ರೇಯಾಂಕವನ್ನು ಸಹ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಯುವರಾಜ್ ಸಿಂಗ್ಗೆ 41ರ ಜನ್ಮದಿನದ ಸಂಭ್ರಮ.. ಯುವಿ ಆಟ ನೆನೆದು ಟ್ವೀಟ್ ಮಾಡಿದ ಬಿಸಿಸಿಐ