ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ನಡುವಣ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 67 ರನ್ಗಳಿಂದ ಈಗಾಗಲೇ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಇದೀಗ 2ನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ. ಈ ಪಂದ್ಯದಲ್ಲೂ ಗೆಲುವು ದಾಖಲಿಸಿದರೆ ಭಾರತ ಸರಣಿ ಗೆದ್ದಂತೆ. ಸೋಲಿನ ಹತಾಶೆಯಲ್ಲಿರುವ ಶ್ರೀಲಂಕಾ ತಂಡಕ್ಕೆ ಈ ಗೆಲುವು ಅನಿವಾರ್ಯವಾಗಿದೆ. ಹಾಗಾಗಿ ಇಂದಿನ ಪಂದ್ಯ ಕುತೂಹಲ ಹೆಚ್ಚಿಸಿದೆ.
ಬಲ ಭುಜದ ನೋವಿನಿಂದಾಗಿ ಟೀಂ ಇಂಡಿಯಾದ ಯುಜುವೇಂದ್ರ ಚಹಾಲ್ 2ನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಸ್ಥಾನವನ್ನು ಕುಲ್ದೀಪ್ ಯಾದವ್ ತುಂಬಿದ್ದಾರೆ. ಎದುರಾಳಿ ದಸುನ್ ಶಾನಕ ನೇತೃತ್ವದ ಶ್ರೀಲಂಕಾ ಕೂಡ ಎರಡು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ಮೊದಲ ಪಂದ್ಯದಲ್ಲಿಯೂ ಟಾಸ್ ಗೆದ್ದಿದ್ದ ಲಂಕಾ, ಚೇಸ್ ಮಾಡುವ ನಿರ್ಧಾರದಿಂದ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತ್ತು. ಆದರೆ, ಇಂದು ತಮ್ಮ ನಿರ್ಧಾರವನ್ನು ಬದಲಿಸಿಕೊಂಡು ಕಣಕ್ಕಿಳಿದಿದ್ದಾರೆ.
ಟಾಸ್‌ಗೂ ಮುನ್ನ ನಾನು ಎರಡು ಮನಸ್ಸಿನಲ್ಲಿದ್ದೆ. ಕಳೆದ ಬಾರಿಯಂತೆಯೇ ನಾನು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೆ. ಆದರೆ, ಟಾಸ್ ಅವರ ಪಾಲಾಯಿತು. ಈ ಮೈದಾನವನ್ನು ನೋಡುತ್ತಿದ್ದಂತೆ ಫೀಲ್ಡಿಂಗ್ ಇಷ್ಟವಾಗುತ್ತಿದೆ. ನಮ್ಮ ತಂಡ ಈ ಪಂದ್ಯ ಗೆಲ್ಲುವ ಮೂಲಕ ಸರಣಿಯನ್ನು ವಶಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಬಲ ಭುಜದ ನೋವಿನಿಂದಾಗಿ ಯುಜುವೇಂದ್ರ ಚಹಾಲ್ 2ನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಸ್ಥಾನವನ್ನು ಕುಲ್ದೀಪ್ ಯಾದವ್ ತುಂಬಲಿದ್ದಾರೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದರು.
ಇಂದಿನ ಉತ್ಸಾಹ ಗಮನಿಸಿ ನಾವು ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತಿದ್ದೇವೆ. ವಿಕೆಟ್ ಕಳೆದುಕೊಳ್ಳದೇ ಉತ್ತಮ ಸ್ಕೋರ್ ನೀಡುವುದಕ್ಕೆ ನಮ್ಮ ಮೊದಲ ಆದ್ಯತೆ. ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ನಿರ್ಧರಿಸಿದ್ದೇವೆ. ಹಾಗಾಗಿ ಭುಜದ ಗಾಯದಿಂದ ಮಧುಶಂಕ ಮತ್ತು ಪಾತುಮ್ ನಿಸ್ಸಾಂಕ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನವನ್ನು ಫೆರ್ನಾಂಡೋ ಚೊಚ್ಚಲ ಮತ್ತು ಲಹಿರು ಕುಮಾರ ತುಂಬಲಿದ್ದಾರೆ ಎಂದು ದಸುನ್ ಶಾನಕ ಟಾಸ್ ಬಳಿಕ ತಮ್ಮ ಅನಿಸಿಕೆ ಹೇಳಿಕೊಂಡರು.
ಶತಕ ಸಿಡಿಸುವ ಉತ್ಸಾಹ: ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 67 ರನ್‌ಗಳ ಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಮತ್ತೆ ಫಾರ್ಮ್‌ಗೆ ಮರಳಿರುವುದರಿಂದ ಟೀಂ ಇಂಡಿಯಾಗೆ ಧೈರ್ಯ ಬಂದಂತಾಗಿದೆ. ರೋಹಿತ್ ಶರ್ಮಾ 67 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ 83 ರನ್ ಗಳಿಸಿದರೆ, ಅವರ ಆರಂಭಿಕ ಜೊತೆಗಾರ ಶುಭಮನ್ ಗಿಲ್ 60 ಎಸೆತಗಳಲ್ಲಿ 11 ಬೌಂಡರಿ ಒಳಗೊಂಡ 70 ರನ್ ಗಳಿಸಿದ್ದರು.
ಭಾರತದ ಪರ ಗರಿಷ್ಠ ರನ್ ಗಳಿಸಿದ ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 113 ರನ್ ಗಳಿಸಿ ದಾಖಲೆ ಬರೆದಿದ್ದರು. ಅದೇ ಹುಮ್ಮಸ್ಸಿನಲ್ಲಿರುವ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿಯೂ ಶತಕ ಸಿಡಿಸುವ ಉತ್ಸಾಹದಲ್ಲಿದ್ದಾರೆ.
ನಾಯಕನ ಏಕಾಂಗಿ ಹೋರಾಟ: ಲಂಕಾ ಪರ ದಸುನ್ ಶನಕ ತಂಡದ ವಿಕೆಟ್ ಒಂದೆಡೆ ಉರುಳುತ್ತಿದ್ದರೂ ಗೆಲುವಿಗಾಗಿ ತಮ್ಮ ಪ್ರಯತ್ನ ಮುಂದುವರೆಸಿದ್ದರು. ತಮ್ಮ ಫಾರ್ಮ್ ಮುಂದುವರೆಸಿದ್ದ ಅವರು, 88 ಬಾಲ್ಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್ನಿಂದ ಶತಕ ಗಳಿಸಿದ್ದರು. ಆದರೆ, ಅವರ ಶತಕ ಪಂದ್ಯ ಗೆಲ್ಲಿಸುವಲ್ಲಿ ಸಹಕಾರಿಯಾಗಲಿಲ್ಲ.
ಟೀಂ ಇಂಡಿಯಾ (ಆಡುವ 11ರ ಬಳಗ): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್
ಶ್ರೀಲಂಕಾ (ಆಡುವ 11ರ ಬಳಗ): ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಅವಿಷ್ಕ ಫೆರ್ನಾಂಡೊ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕಾ, ದಸುನ್ ಶಾನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ