ಮುಂಬೈ: ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿ ಬದಲಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವುದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈಗಾಗಲೆ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಸರಣಿ ಮುಗಿದ ಬಳಿಕ ಟೆಸ್ಟ್ ಸರಣಿ ನಡೆಯಲಿದ್ದು, ಐಪಿಎಲ್ ಪ್ರತಿನಿಧಿಸುವ ಆಟಗಾರರು ಟೆಸ್ಟ್ ತಂಡದಿಂದ ಹೊರಬಂದು ಐಪಿಎಲ್ಗಾಗಿ ಭಾರತಕ್ಕೆ ಪ್ರಯಾಣಿಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.
ಎರಡೂ ದೇಶಗಳ ಒಪ್ಪಂದದ ಪ್ರಕಾರ ಸಿಎಸ್ಎ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವುದಕ್ಕೆ ತನ್ನ ಆಟಗಾರರಿಗೆ ಎನ್ಒಸಿ ನೀಡಬೇಕಿದೆ. ಹಾಗೆಯೇ ಈ ಸಂದರ್ಭದಲ್ಲಿ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸಬಾರದು ಎನ್ನುವ ಒಪ್ಪಂದವಾಗಿದೆ. ಆದರೆ ಈ ಬಾರಿ ಐಪಿಎಲ್ 10 ತಂಡಗಳ ಕಾರಣ ಹೆಚ್ಚಿನ ದಿನಗಳಿಗೆ ವಿಸ್ತಾರವಾಗಿದೆ. ಹಾಗಾಗಿ ಈ ಸರಣಿ ಮತ್ತು ಐಪಿಎಲ್ ನಡುವೆ ಸಂಘರ್ಷ ಉಂಟಾಗಿದೆ. ಆದರೂ ಟೆಸ್ಟ್ ಅಥವಾ ಐಪಿಎಲ್ ಎರಡರಲ್ಲಿ ಆಡುವ ಆಯ್ಕೆಯನ್ನು ಸಿಎಸ್ಎ ತನ್ನ ಆಟಗಾರರಿಗೆ ಬಿಟ್ಟುಕೊಟ್ಟಿತ್ತು. ಇದೀಗ ಆಟಗಾರರು ಐಪಿಎಲ್ ಆಡುವುದಕ್ಕೆ ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ರಬಾಡ,ಎಂಗಿಡಿ, ವ್ಯಾನ್ ಡರ್ ಡಸೆನ್,ಮಾರ್ಕ್ರಮ್, ಜಾನ್ಸನ್ ಮತ್ತು ನಾರ್ಕಿಯ ದಕ್ಷಿಣ ಆಫ್ರಿಕಾದ ಟೆಸ್ಟ್ ಯೋಜನೆಯಲ್ಲಿದ್ದಾರೆ. ಈ ಆಟಗಾರರು ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಆದರೆ ಟೆಸ್ಟ್ ತಂಡದಲ್ಲಿಲ್ಲದ ಡೇವಿಡ್ ಮಿಲ್ಲರ್, ಕ್ವಿಂಟನ್ ಡಿ ಕಾಕ್, ಡ್ವೇನ್ ಪ್ರಿಟೋರಿಯಸ್ ಏಕದಿನ ಸರಣಿ ಮುಗಿಯುತ್ತಿದ್ದಂತೆ ಭಾರತಕ್ಕೆ ಬರಲಿದ್ದಾರೆ.
ಇದನ್ನೂ ಓದಿ:ಐಪಿಎಲ್ಗೆ ಸ್ಪರ್ಧೆಯೊಡ್ಡಲು ಪಿಎಸ್ಎಲ್ನಲ್ಲಿ ಹೊಸ ಬದಲಾವಣೆ ತರಲು ಬಯಸಿದ್ದೇನೆ : ರಮೀಜ್ ರಾಜಾ