ಕೇಪ್ ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಇಲ್ಲಿ ನಡೆಯುತ್ತಿರುವ 3ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಭಾರತ ತನ್ನ 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುವುದರೊಂದಿಗೆ, ವಿಕೆಟ್ ಕೀಪರ್ ರಿಷಭ್ ಪಂತ್ರ ಶತಕ ಸಾಹಸದಿಂದ 198 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿತು.
ಮೊದಲ ಇನ್ನಿಂಗ್ಸ್ನಲ್ಲಿ ಪಡೆದ 14 ರನ್ಗಳ ಮುನ್ನಡೆ ಸೇರಿ 212 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ 4ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. ಇಂದು ಕೊನೆಯ ದಿನದಾಟ ಬಾಕಿ ಉಳಿದಿದ್ದು, ದಕ್ಷಿಣ ಆಫ್ರಿಕಾ ಗೆಲುವಿಗೆ 111 ರನ್ಗಳು ಮಾತ್ರವೇ ಬೇಕಿದೆ.
ಪಂಥ್ 100, ಕೊಹ್ಲಿ 29 ಉಳಿದ 9 ಆಟಗಾರರಿಂದ 41
ಇನ್ನು ಭಾರತ ಬ್ಯಾಟ್ಸಮನ್ಗಳು 2ನೇ ಇನ್ನಿಂಗ್ಸ್ನಲ್ಲಿ ಎಷ್ಟರ ಮಟ್ಟಿಗೆ ವೈಫಲ್ಯ ಅನುಭವಿಸಿದರು ಎಂದರೆ, ವಿಕೆಟ್ ಕೀಪರ್ ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಿ ಕೆಚ್ಚೆದೆಯ 100 ರನ್ ಬಾರಿಸಿದರೆ, ನಾಯಕ ವಿರಾಟ್ ಕೊಹ್ಲಿ ಹೋರಾಟದ 29 ರನ್ ಗಳಿಸಿದರು. ಉಳಿದ 9 ಬ್ಯಾಟ್ಸಮನ್ಗಳು ಸೇರಿ ಕಲೆಹಾಕಿದ್ದು, ಕೇವಲ 41 ರನ್ ಮಾತ್ರ. ಇದರಲ್ಲಿ ಕೆ.ಎಲ್. ರಾಹುಲ್ 10 ರನ್ ಬಾರಿಸಿ ಎರಡಂಕಿ ಮೊತ್ತ ಗಳಿಸಿದ್ದು ಬಿಟ್ಟರೆ, ಇನ್ನು ಎಂಟು ಬ್ಯಾಟರ್ಗಳು ಒಂದಂಕಿ ಮೊತ್ತದಲ್ಲೇ ಔಟಾಗಿದ್ದಾರೆ.
ವಿಶೇಷ ಎಂದರೆ ಈ ಪಂದ್ಯದ ಎರಡೂ ಇನ್ನಿಂಗ್ಸ್ನಲ್ಲಿ ಭಾರತದ ಎಲ್ಲ ಬ್ಯಾಟ್ಸ್ಮನ್ಗಳು (20) ಕ್ಯಾಚ್ ನೀಡಿ ಔಟಾಗಿದ್ದಾರೆ. ಈ ಮೂಲಕ 145 ವರ್ಷಗಳ ಹಿಂದಿನ ದಾಖಲೆ ಮುರಿದಂತಾಗಿದೆ.
ಡಿಆರ್ಎಸ್ ನಿಯಮಕ್ಕೆ ಕೊಹ್ಲಿ ಗರಂ
4ನೇ ದಿನದಾಟದಲ್ಲಿ ದಕ್ಷಿಣ ಆಪ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಅಶ್ವಿನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಅಂಪೈರ್ ಎರಾಸ್ಮಸ್ ಔಟ್ ಎಂದು ಘೋಷಿಸಿದರು. ಬಳಿಕ ಎಲ್ಗರ್ ಡಿಎರ್ಎಸ್ ಮೊರೆ ಹೋದರು. ಈ ವೇಳೆ, ಬಾಲ್ ವಿಕೆಟ್ಗೆ ತಾಕದೇ ಮೇಲೆ ಹೋದಂತೆ ತೋರಿಸಿ, ನಾಟ್ಔಟ್ ಎಂದು ತೀರ್ಪು ನೀಡಲಾಯಿತು.
ಮೂರನೇ ಅಂಪೈರ್ ತೀರ್ಪಿನಿಂದ ಕೆರಳಿದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಮೈಕ್ ಹತ್ತಿರ ಹೋಗಿ ಪ್ರಸಾರಕರನ್ನು ಟೀಕಿಸಿದ್ದಾರೆ. ಅಲ್ಲದೇ, ಯಾವಾಗಲೂ ಎದುರಾಳಿ ತಂಡದ ಬಗ್ಗೆ ಮಾತ್ರವಲ್ಲ, ನಿಮ್ಮ ತಂಡದ ಬಗ್ಗೆಯೂ ಪರಿಶೀಲಿಸಿ. ಬರೀ 'ಕ್ಯಾಚ್ ಮತ್ತು ಬೌಲ್ಡ್ ಮಾಡಿದರಷ್ಟೇ ಔಟ್' ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೆ.ಎಲ್. ರಾಹುಲ್ 11 ಜನರ ವಿರುದ್ಧ ಇಡೀ ದೇಶವೇ ನಿಂತಿದೆ ಎಂದು ಟೀಕಿಸಿದರೆ, ಅಶ್ವಿನ್, ಗೆಲ್ಲಲು ಬೇರೆ ದಾರಿ ಹುಡುಕಿ ಎಂದು ಪಂದ್ಯ ಪ್ರಸಾರಕರ ಬಗ್ಗೆ ಅತೃಪ್ತಿ ಹೊರಹಾಕಿದ್ದಾರೆ.
ಇದನ್ನೂ ಓದಿ: ಯಾರ ಪಾಲಿಗೆ ಟೆಸ್ಟ್ ಸರಣಿ?: ಹರಿಣಗಳಿಗೆ ಬೇಕು 111 ರನ್, ಭಾರತಕ್ಕೆ ಬೇಕು 8 ವಿಕೆಟ್!