ಚೆನ್ನೈ: ಮೊದಲ ಪಂದ್ಯದ ವೈಫಲ್ಯದ ನಂತರವೂ 2ನೇ ಪಂದ್ಯದಲ್ಲಿ ಅವಕಾಶ ಪಡೆದ ಶಹ್ಬಾಜ್ ತಮ್ಮ ಆಯ್ಕೆಯನ್ನು ಪ್ರದರ್ಶನದ ಮೂಲಕ ಸಮರ್ಥಿಸಿಕೊಂಡಿದ್ದಾರೆ ಎಂದು ಆರ್ಸಿಬಿಯ ಉದಯೋನ್ಮುಖ ತಾರೆ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
ಶಹ್ಬಾಜ್ ಅಹ್ಮದ್ 17ನೇ ಓವರ್ನಲ್ಲಿ 3 ವಿಕೆಟ್ ಪಡೆದು ಪಂದ್ಯದಲ್ಲಿ ಅದ್ಭುತವಾಗಿ ತಿರುಗಿ ಬೀಳಲು ಕಾರಣರಾಗಿದ್ದರು. ಜೊತೆಗೆ ಈ ಪಂದ್ಯದಲ್ಲಿ ಅಹ್ಮದ್, ಮ್ಯಾಕ್ಸ್ವೆಲ್ ಮತ್ತು ಎಬಿಡಿಗೂ ಮೊದಲೇ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದರು. ಉತ್ತಮ ಆರಂಭ ಪಡೆದ ಅವರು, ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದರು.
"ಶಹ್ಬಾಜ್ ಮತ್ತು ರಜತ್ ಅಭ್ಯಾಸ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದರು. ಅಹ್ಮದ್ ಒಬ್ಬ ಆಲ್ರೌಂಡರ್, ಅವರ ಸೇರ್ಪಡೆಯಿಂದ ತಂಡದಲ್ಲಿ ಸ್ಪಿನ್ ವಿಭಾಗಕ್ಕೆ ಹೆಚ್ಚುವರಿ ಆಯ್ಕೆ ತೆರೆಯುತ್ತದೆ. ಅಲ್ಲದೆ ಇಂತಹ ಸ್ಲೋ ಪಿಚ್ ಅವರಿಗೆ ಉತ್ತಮ ರೀತಿಯಲ್ಲಿ ಹೊಂದಿಕೊಳ್ಳುತ್ತದೆ. ಇದರಿಂದ ತಂಡಕ್ಕೆ ಅನುಕೂಲವಾಗುತ್ತದೆ" ಎಂದು ಸಿರಾಜ್ ಪಂದ್ಯದ ನಂತರ ತಿಳಿಸಿದ್ದಾರೆ.
ಅಹ್ಮದ್ ತಮ್ಮ 17ನೇ ಓವರ್ನಲ್ಲಿ ಜಾನಿ ಬೈರ್ಸ್ಟೋವ್, ಮನೀಶ್ ಪಾಂಡೆ ಮತ್ತು ಅಬ್ದುಲ್ ಸಮದ್ ವಿಕೆಟ್ ಪಡೆದು ಕೈಯಲ್ಲಿದ್ದ ಗೆಲುವನ್ನು ಆರ್ಸಿಬಿ ಕಡೆಗೆ ಬದಲಾಯಿಸಿದ್ದರು. ಆದರೆ ತಂಡದಲ್ಲಿ ಅನುಭವಿ ಬೌಲರ್ಗಳಿದ್ದರೂ ಶಹ್ಬಾಜ್ಗೆ ಚೆಂಡು ನೀಡಿದರ ಹಿಂದಿದ್ದ ಯೋಜನೆಯನ್ನು ಸಿರಾಜ್ ಹೇಳಿದ್ದಾರೆ.
ನಮಗೆ ಈ ಸಂದರ್ಭದಲ್ಲಿ ವಾಷಿಂಗ್ಟನ್ ಸುಂದರ್ ಅವರ ಓವರ್ ಕೂಡ ಉಳಿದಿತ್ತು. ಆದರೆ ಕ್ರೀಸ್‌ನಲ್ಲಿ ಇಬ್ಬರು ಬಲಗೈ ಬ್ಯಾಟ್ಸ್‌ಮನ್‌ಗಳು ಇದ್ದ ಕಾರಣ ಎಡಗೈ ಸ್ಪಿನ್ನರ್‌ನನ್ನು ಕಣಕ್ಕಿಳಿಸುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಇದು ಪಂದ್ಯದ ಗತಿಯನ್ನು ಬದಲಿಸಿತು. ಅಲ್ಲದೆ ಅವರು ತಮ್ಮ ಮೊದಲ ಓವರ್ನಲ್ಲೇ ಮನೀಶ್ ಪಾಂಡೆ ವಿಕೆಟ್ ಪಡೆಯುವ ಅವಕಾಶವನ್ನು ಸೃಷ್ಟಿಸಿದ್ದರು. ಹಾಗಾಗಿ ಮತ್ತೊಮ್ಮೆ ಅವರ ಮೇಲೆ ನಂಬಿಕೆ ಇಡಲಾಯಿತು" ಎಂದು 4 ಓವರ್ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದಿದ್ದ ಸಿರಾಜ್ ವಿವರಿಸಿದ್ದಾರೆ.
ಇದನ್ನು ಓದಿ: Watch: ಆರ್ಸಿಬಿಗೆ ಪಂದ್ಯ ಗೆಲ್ಲಿಸಿಕೊಟ್ಟ ಶಹ್ಬಾಜ್ ಅಹ್ಮದ್ ಎಸೆದ 17ನೇ ಓವರ್ ಹೇಗಿತ್ತು ನೋಡಿ!