ಮ್ಯಾಚೆಂಸ್ಟರ್(ಇಂಗ್ಲೆಂಡ್): ಇಂಗ್ಲೆಂಡ್ ವಿರುದ್ಧ ಮ್ಯಾಚೆಂಸ್ಟರ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಪಂತ್ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಅನೇಕ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಪ್ರಮುಖವಾಗಿ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಶತಕ ಸಿಡಿಸಿರುವ ಏಷ್ಯಾದ ಏಕೈಕ ವಿಕೆಟ್ ಕೀಪರ್ ಎಂಬ ಸಾಧನೆಗೂ ಅವರು ಪಾತ್ರರಾಗಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಪಾಲಿಗೆ ಆಪತ್ಭಾಂದವನ ಆಟವಾಡಿದ ಪಂತ್ ತಾವು ಎದುರಿಸಿದ 113 ಎಸೆತಗಳಲ್ಲಿ ಅಜೇಯ 125 ರನ್ಗಳಿಕೆ ಮಾಡಿ, ತಂಡವನ್ನ ಗೆಲುವಿನ ದಡ ಸೇರಿಸಿದರು. ಈ ಮೂಲಕ ಭಾರತದ ಪರ ರಾಹುಲ್ ದ್ರಾವಿಡ್, ಕೆಎಲ್ ರಾಹುಲ್ ಬಳಿಕ ವಿದೇಶಿ ನೆಲದಲ್ಲಿ ಶತಕ ಸಿಡಿಸಿರುವ ಮೂರನೇ ವಿಕೆಟ್ ಕೀಪರ್ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಟೆಸ್ಟ್, ODIನಲ್ಲಿ ಶತಕ ಸಿಡಿಸಿದ ಏಕೈಕ ಏಷ್ಯಾ ವಿಕೆಟ್ ಕೀಪರ್: ಕಳೆದ ಕೆಲ ದಿನಗಳ ಹಿಂದೆ ಭಾರತ - ಇಂಗ್ಲೆಂಡ್ ತಂಡಗಳ ನಡುವೆ ನಡೆದ ಫೈನಲ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಪಂತ್, ಇದೀಗ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಶತಕ ದಾಖಲಿಸಿದ ಏಷ್ಯಾದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದಾರೆ. ಇದರ ಜೊತೆಗೆ ಏಕದಿನ ಕ್ರಿಕೆಟ್ನಲ್ಲಿ ರಿಷಭ್ ಪಂತ್ ಬ್ಯಾಟ್ನಿಂದ ಸಿಡಿದ ಮೊದಲ ಶತಕ ಇದಾಗಿದೆ.
ಇದನ್ನೂ ಓದಿರಿ: ರಿಷಬ್ ಪಂತ್ ಹೆಸರು ನೆನಪಿಡಿ! ನಿರ್ಭಯ ಆಟಗಾರನ ಬ್ಯಾಟಿಂಗ್ ಮೋಡಿಗೆ ಕ್ರಿಕೆಟ್ ಲೋಕ ನಿಬ್ಬೆರಗು
ಏಷ್ಯಾದಿಂದ ಹೊರಗಡೆ ಶತಕ ಸಿಡಿಸಿದ ಮೂರನೇ ವಿಕೆಟ್ ಕೀಪರ್: ರಾಹುಲ್ ದ್ರಾವಿಡ್, ಕೆ.ಎಲ್ ರಾಹುಲ್ ನಂತರ ಏಷ್ಯಾದಿಂದ ಹೊರಗಡೆ ವಿದೇಶಿ ನೆಲದಲ್ಲಿ ಶತಕ ಸಿಡಿಸಿದ ಮೂರನೇ ಭಾರತೀಯ ವಿಕೆಟ್ ಕೀಪರ್ ಆಗಿ ಪಂತ್ ಹೊರಹೊಮ್ಮಿದ್ದಾರೆ. ಈ ಹಿಂದೆ ದ್ರಾವಿಡ್ 1999ರಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ನಲ್ಲಿ ಹಾಗೂ 2020ರಲ್ಲಿ ಕೆ.ಎಲ್ ರಾಹುಲ್ ನ್ಯೂಜಿಲ್ಯಾಂಡ್ ವಿರುದ್ಧ ಶತಕ ಸಿಡಿಸಿ ಮಿಂಚಿದ್ದರು. ಇದೀಗ ಪಂತ್ ಕೂಡ ಆ ದಾಖಲೆ ಪಟ್ಟಿಗೆ ಸೇರಿದ್ದಾರೆ.