ಬೆಂಗಳೂರು: ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಇಲ್ಲಿ ನಡೆದ ಆರ್‌ಸಿಬಿ ಇನ್ನೋವೇಶನ್ ಲ್ಯಾಬ್‌ನ ಲೀಡರ್ಸ್ ಮೀಟ್ ಇಂಡಿಯಾದಲ್ಲಿ ಮಾತನಾಡುತ್ತಾ, ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಅನ್ನು ಬಹುನಗರ ಸ್ವರೂಪದಲ್ಲಿ ನಡೆಸಬೇಕು ಎಂದು ಹೇಳಿದರು.
ಡಬ್ಲ್ಯುಪಿಎಲ್ ಯಶಸ್ಸಿನ ಬಗ್ಗೆ ಮಾತಾನಾಡುತ್ತಾ, ಬಹುನಗರ ಮಾದರಿಯಲ್ಲಿ ಮುಂದಿನ ಆವೃತ್ತಿಗಳನ್ನು ನಡೆಸಲು ಅಭಿಮಾನಿಗಳೇ ಅವಕಾಶ ಮಾಡಿಕೊಡಬೇಕು. ಇದು ಅವರ ಪ್ರೋತ್ಸಾಹದಿಂದ ಮಾತ್ರ ಸಾಧ್ಯ ಎಂದರು. "ಡಬ್ಲ್ಯುಪಿಎಲ್ ಅನ್ನು ಬಹುನಗರ ಮಾದರಿಯಲ್ಲಿ ಆಡುವುದು ನಿಜಕ್ಕೂ ಕುತೂಹಲ ಭರಿತವಾಗಿರುತ್ತದೆ. ಮುಂದಿನ ಆವೃತ್ತಿಗಳು ಈ ರೀತಿ ಆಯೋಜನೆ ಆಗಬಹುದು ಎಂದು ನಾನು ಭಾವಿಸುತ್ತೇನೆ. ನಾನೋರ್ವ ಆರ್ಸಿಬಿಯ ಅಭಿಮಾನಿಯಾಗಿ ತವರು ಮೈದಾನದಲ್ಲಿ ಪಂದ್ಯ ನೋಡಲು ಇಷ್ಟಪಡುತ್ತೇನೆ. ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ, ಆರ್‌ಸಿಬಿ ಎಂಬ ಘೋಷಣೆಯ ನಡುವೆ ಪಂದ್ಯವಾಡುವುದು ನಿಜಕ್ಕೂ ರೋಚಕ ಅನುಭವ ನೀಡುತ್ತದೆ. ಡಬ್ಲ್ಯುಪಿಎಲ್ ಇನ್ನಷ್ಟು ಅಭಿಮಾನಿಗಳಿಗೆ ತಲುಪಿದ್ದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಅವಕಾಶ ಸಿಗಬಹುದು" ಎಂದರು.
ಡಬ್ಲ್ಯುಪಿಎಲ್ ಎರಡನೇ ಸೀಸನ್‌ಗೆ ಮುಂಚಿತವಾಗಿ ಹರಾಜಿನ ಬಗ್ಗೆ ಮಾತನಾಡುತ್ತಾ, ತಂಡದಿಂದ ಯಾರನ್ನು ಕೈಬಿಡಬೇಕು ಮತ್ತು ಯಾರನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಈಗಾಗಲೇ ಫ್ರಾಂಚೈಸಿಯಲ್ಲಿ ಚರ್ಚೆಗಳಾಗಿವೆ. ಹೀಗಾಗಿ ಹರಾಜು ಪ್ರಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ. ನಮ್ಮ ಲೆಕ್ಕಾಚಾರದಲ್ಲಿರುವ ಆಟಗಾರ್ತಿಯರನ್ನು ನಾವು ತಂಡಕ್ಕೆ ಸೇರಿಸಿಕೊಳ್ಳುತ್ತೇವೆ" ಎಂದಿದ್ದಾರೆ.
ಭಾರತದಲ್ಲಿ ಮಹಿಳಾ ಕ್ರೀಡೆಗಳ ಬೆಳವಣಿಗೆಯ ಕುರಿತು ಮಾತನಾಡಿದ ಮಂಧಾನಾ, ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರೀಡಾಪಟುಗಳ ಗಮನಾರ್ಹ ಸಾಧನೆಗಳ ಬಗ್ಗೆ ಹೇಳಿದರಲ್ಲದೇ ಸಾಂಸ್ಕೃತಿಕ ಬದಲಾವಣೆಯ ಬಗ್ಗೆಯೂ ತಿಳಿಸಿದರು. "ಭಾರತದ ಮಹಿಳೆಯರು ಕಳೆದ ಐದರಿಂದ 10 ವರ್ಷಗಳಲ್ಲಿ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಇತರ ಕ್ರೀಡೆಯಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನೀವು ಕಳೆದ ಒಲಿಂಪಿಕ್ಸ್, ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟಗಳನ್ನು ನೋಡಿದರೆ ಮಹಿಳಾ ಕ್ರೀಡಾಪಟುಗಳು ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೇ ಸಣ್ಣಪುಟ್ಟ ಹಳ್ಳಿಗಳಿಂದ ಬಂದು ದೇಶಕ್ಕಾಗಿ ಸಾಧನೆ ಮಾಡಿದ್ದಾರೆ, ಇದು ಸ್ಫೂರ್ತಿಯ ವಿಷಯವಾಗಿದೆ. ಸಾಮಾನ್ಯವಾಗಿ ಮಹಿಳಾ ಕ್ರೀಡೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ಹೀಗೆ ಮಾಡುವುದರಿಂದ ಟಿಕೆಟ್, ಡಿಜಿಟಲ್ ಹಕ್ಕುಗಳ ಮಾರಾಟವೂ ಹೆಚ್ಚಾಗಬಹುದು" ಎಂದು ತಿಳಿಸಿದರು.
ಇದನ್ನೂ ಓದಿ: ಟಿ20: ಭಾರತ ವನಿತೆಯರಿಗೆ ಇಂಗ್ಲೆಂಡ್ ಸವಾಲು; ಸೋಲು-ಗೆಲುವಿನ ಲೆಕ್ಕಾಚಾರ ಹೀಗಿದೆ