ಕರಾಚಿ : ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸೋಲು ಕಂಡ ನಂತರ, ಕೊಹ್ಲಿ ಅವರ ನಾಯಕತ್ವದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಭಾರತ ವಿರಾಟ್ ನಾಯಕತ್ವದಲ್ಲಿ 2017ರ ಚಾಂಪಿಯನ್ ಟ್ರೋಫಿ, 2021 WTCಯಲ್ಲಿ ಫೈನಲ್ನಲ್ಲಿ ಸೋಲು ಕಂಡರೆ, 2019ರ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಕಿವೀಸ್ ವಿರುದ್ಧ ಸೋಲು ಕಂಡಿತ್ತು.
ಆದರೆ, ವಿರಾಟ್ ನಾಯಕತ್ವವನ್ನು ಟೀಕಿಸುವವರ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಕಮ್ರನ್ ಅಕ್ಮಲ್. ಎಂಎಸ್ ಧೋನಿಯ ನಂತರ ವಿರಾಟ್ ಕೊಹ್ಲಿ ಭಾರತದ ಅತ್ಯುತ್ತಮ ನಾಯಕರಾಗಿದ್ದಾರೆ. ಅವರು 70 ಶತಕಗಳನ್ನು ಹೊಂದಿದ್ದಾರೆ. ಅವರು 2017 ಮತ್ತು 2019 ವಿಶ್ವಕಪ್ನಲ್ಲಿ ಭಾರತವನ್ನು ನಾಕೌಟ್ ಹಂತಕ್ಕೆ ಕೊಂಡೊಯ್ದಿದ್ದಾರೆ. ಇಷ್ಟು ಸಾಕಲ್ಲವೇ, ಭಾರತ ಸೋಲು ಕಂಡರೆ, ಅದರಲ್ಲಿ ಅವರ ತಪ್ಪೇನಿದೆ ಎಂದಿದ್ದಾರೆ.
ಅಲ್ಲದೆ ಭಾರತ ತಂಡ ಅವರ(ಕೊಹ್ಲಿ) ನಾಯಕತ್ವದಲ್ಲಿ 5 ವರ್ಷಗಳ ಕಾಲ ನಂಬರ್ 1 ಸ್ಥಾನದಲ್ಲಿದೆ. ಅವರ ಸಾಧನೆ ಮತ್ತು ಸೇವೆಯನ್ನು ಒಮ್ಮೆ ನೋಡಿ. ಅವರ ನಾಯಕತ್ವ ಭಯಾನಕ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಅವರೊಬ್ಬ ಅದ್ಭುತ ಆಟಗಾರ ಮತ್ತು ತಮ್ಮನ್ನು ತಾವೂ ರೂಪಿಸಿಕೊಂಡಿರುವ ರೀತಿ ಅಮೋಘವಾಗಿದೆ ಎಂದು ಅಕ್ಮಲ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅವರೊಬ್ಬ ಅದ್ಭುತ ನಾಯಕ, ಭಾರತ ತಂಡದ ನಾಯಕತ್ವದ ಬದಲಾವಣೆ ಮಾಡಿದರೆ ಐಸಿಸಿ ಟ್ರೋಫಿ ಗೆಲ್ಲಲಿದೆ ಎನ್ನುವುದಕ್ಕೆ ಯಾರು ಗ್ಯಾರಂಟಿ ಕೊಡಲಾರರು. ಇದು ಕೇವಲ ಅದೃಷ್ಟದ ವಿಷಯವಷ್ಟೇ.. ಬೇರೊಬ್ಬರತ್ತ ಬೊಟ್ಟು ಮಾಡಿ ತೋರಿಸುವುದು ತುಂಬಾ ಸುಲಭ, ಅದರಲ್ಲೂ ಕ್ರಿಕೆಟ್ ಬಗ್ಗೆ ಯಾವುದೇ ಜ್ಞಾನ ಇಲ್ಲದವರು, ಯಾವುದೇ ಗಲ್ಲಿ ತಂಡವನ್ನು ಮುನ್ನಡೆಸದವರು ಭಾರತಕ್ಕೆ ನಾಯಕನನ್ನು ಬದಲಿಸಲು ಸಲಹೆ ನೀಡುತ್ತಿದ್ದಾರೆ ಎಂದು ಅಕ್ಮಲ್ ತಿಳಿಸಿದ್ದಾರೆ.
ಇದನ್ನು ಓದಿ: ಐಪಿಎಲ್ನಲ್ಲಿ ಆಡಿರುವುದು ಸ್ಯಾಮ್ ಕರ್ರನ್ಗೆ ಭಾರಿ ಅನುಕೂಲವಾಗಿದೆ : ಇಂಗ್ಲೆಂಡ್ ಕೋಚ್