ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಅರ್ಶದೀಪ್ ಸಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ದಕ್ಷಿಣ ಆಫ್ರಿಕಾದ ಕಗಿಯೋ ರಬಾಡ, 23 ವರ್ಷದ ಯುವ ವೇಗಿ ಇಂಡಿಯನ್ ಪ್ರೀಮಿಯರ್ ಲೀಗ್ನ ಶ್ರೇಷ್ಠ ಡೆತ್ ಬೌಲರ್ ಎಂದು ಪ್ರಶಂಸಿಸಿದ್ದಾರೆ. ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 11 ರನ್ಗಳಿಂದ ಗೆಲ್ಲುವುದಕ್ಕೆ ಅರ್ಶದೀಪ್ ಮತ್ತು ರಬಾಡ ಪ್ರದರ್ಶನ ಪಂಜಾಬ್ ತಂಡಕ್ಕೆ ದೊಡ್ಡ ತಿರುವಾಗಿತ್ತು.
ಅದರಲ್ಲೂ, 24 ಎಸೆತಗಳಿಗೆ 47 ರನ್ಗಳ ಅಗತ್ಯವಿದ್ದ ಸಂದರ್ಭದಲ್ಲಿ 17ನೇ ಓವರ್ ಬೌಲಿಂಗ್ ಮಾಡಿದ ಅರ್ಶದೀಪ್, ಸೆಟ್ ಬ್ಯಾಟರ್ಗಳಾದ ಅಂಬಾಟಿ ರಾಯುಡು ಮತ್ತು ಜಡೇಜಾ ವಿರುದ್ಧ ಕೇವಲ 6 ರನ್ ಬಿಟ್ಟುಕೊಟ್ಟರೆ, ನಂತರ 19ನೇ ಓವರ್ನಲ್ಲಿ ಕೇವಲ ಧೋನಿ-ಜಡೇಜಾ ವಿರುದ್ಧ ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಕೇವಲ ಒಂದು ಬೌಂಡರಿಸಹಿತ 8 ರನ್ ಮಾತ್ರ ನೀಡಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಕೊನೆಗೆ ಸಿಎಸ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 27 ರನ್ಗಳ ಅಗತ್ಯವಿತ್ತು. ಆದರೆ ಕೇವಲ 15 ರನ್ಗಳಿಸಿ 11 ರನ್ಗಳಿಂದ ಸೋಲು ಕಂಡಿತು.
![Arshdeep perhaps the best death-overs bowler in IPL](https://etvbharatimages.akamaized.net/etvbharat/prod-images/frnflhhxmaavpgw_2604newsroom_1650968394_572.jpg)
ಈ ಸ್ಪರ್ಧೆಯಲ್ಲಿ ಅರ್ಶದೀಪ್ ಅತ್ಯುತ್ತಮ ಡೆತ್ ಬೌಲರ್ ಎಂದು ನಾನು ಭಾವಿಸುತ್ತೇನೆ. ಅಂಕಿಅಂಶಗಳೇ ಅದನ್ನು ಹೇಳುತ್ತಿವೆ. ಉದಯೋನ್ಮುಖ ಬೌಲರ್ ಸಾಕಷ್ಟು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆ ಮತ್ತು ಅದಕ್ಕೆ ತಕ್ಕ ಪ್ರತಿಭೆ ಅವರಲ್ಲಿದೆ. ಆತ ಒಳ್ಳೆಯ ವ್ಯಕ್ತಿ ಕೂಡಾ ಎಂದು ದಕ್ಷಿಣ ಆಫ್ರಿಕಾ ಪೇಸರ್ ಪಂದ್ಯ ಮುಗಿದ ನಂತರ ತಿಳಿಸಿದರು.
"ನಾನು ಸದಾ ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡುತ್ತೇನೆ. ಹಾಗಾಗಿ ನಾನೇ ಡೆತ್‌ನಲ್ಲಿ ಬೌಲಿಂಗ್ ಮಾಡಲಿದ್ದೇನೆ ಎಂದು ನನಗೆ ತಿಳಿದಿತ್ತು. ಆದರೆ ಆ ವಿಭಾಗದಲ್ಲಿ ಅರ್ಶದೀಪ್ ಅದ್ಭುತ ಮತ್ತು ಅತ್ಯುತ್ತಮ ಶಿಸ್ತು ಹೊಂದಿದ್ದಾರೆ" ಎಂದು 8 ಕೋಟಿ ರೂ.ಗೆ ಪಂಜಾಬ್ ಸೇರಿರುವ ವೇಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಯುಡು ಆಟ ವ್ಯರ್ಥ.. ಧವನ್ ಬ್ಯಾಟಿಂಗ್,ಸಂಘಟಿತ ಬೌಲಿಂಗ್ ಪ್ರದರ್ಶನದಿಂದ ಚೆನ್ನೈ ವಿರುದ್ಧ ಗೆದ್ದ ಪಂಜಾಬ್