ಲಂಡನ್: ಮ್ಯಾಂಚೆಸ್ಟರ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಕೊನೆಯ ಹಾಗೂ ಐದನೇ ಟೆಸ್ಟ್ ರದ್ದತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗೆ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ಪಂದ್ಯಕ್ಕೂ ಮುನ್ನ ತಾವು ಪಾಲ್ಗೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಯಾರೂ ಮಾಸ್ಕ್ ಧರಿಸಿರಲಿಲ್ಲ. ಹಾಗಾಗಿ ಕೋವಿಡ್ ಸೋಂಕು ತಗುಲಿದ್ದರಿಂದ ಈ ಐದನೇ ಟೆಸ್ಟ್ ಅನ್ನು ರದ್ದು ಮಾಡಲಾಯಿತು ಎಂದು ಹೇಳಲಾಗುತ್ತಿದ್ದು, ಶಾಸ್ತ್ರಿ ಈ ವದಂತಿಯನ್ನು ತಳ್ಳಿಹಾಕಿದ್ದಾರೆ.
ವಿನಾಕಾರಣ ನನ್ನನ್ನು ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸೇರಿದ್ದವರಲ್ಲಿ ಯಾರಿಗೂ ಕೋವಿಡ್ ಇರಲಿಲ್ಲ. ಕಾರ್ಯಕ್ರಮ ನಡೆದ 3 ದಿನಕ್ಕೆ ನನ್ನಲ್ಲಿ ಸೋಂಕು ಕಾಣಿಸಿಕೊಂಡಿದೆ. ತಜ್ಞ ವೈದ್ಯರ ಪ್ರಕಾರ ಹೇಳುವುದಾದರೆ ಇದು ಅಸಾಧ್ಯ. ಕಾರಣ ಸೋಂಕು ಕಾಣಿಸಿಕೊಳ್ಳಲು ಕನಿಷ್ಠ ಒಂದು ವಾರವಾದರೂ ಬೇಕು. ಹಾಗಾಗಿ ಈ ಕಾರ್ಯಕ್ರಮದಿಂದ ನನಗೆ ಕೋವಿಡ್ ಬಂದಿಲ್ಲ. ಅದಕ್ಕೂ ಮುನ್ನವೇ ನನಗೆ ಸೋಂಕು ತಗುಲಿರಬಹುದು ಎಂದು ದಿ ಗಾರ್ಡಿಯನ್ ಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ನನಗೆ ಪಶ್ಚಾತಾಪವಿಲ್ಲ. ಒಂದೇ ಕೊಠಡಿಯಲ್ಲಿ ಕುಳಿತುಕೊಳ್ಳುವುದರ ಬದಲಿಗೆ ನಾನು ಅಲ್ಲಿ ಹಲವು ಅದ್ಭುತ ವ್ಯಕ್ತಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಇದು ತಂಡಕ್ಕೂ ವರದಾನವಾಗಿದೆ. ಓವಲ್ ಟೆಸ್ಟ್ ಪಂದ್ಯದ ವೇಳೆ ಅಲ್ಲಿ 5000ಕ್ಕೂ ಹೆಚ್ಚು ಜನ ಬಳಕೆ ಮಾಡಿದ್ದ ಮೆಟ್ಟಿಲಿನಲ್ಲೇ ನಾವೆಲ್ಲರೂ ಓಡಾಡಿದ್ದೇವೆ. ಇಲ್ಲಿ ಸುಮ್ಮನೆ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಕಡೆಗೆ ಬೊಟ್ಟು ಮಾಡಲಾಗುತ್ತಿದೆ ಎಂದು ಹರಿದಾಡುತ್ತಿರುವ ವದಂತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಂಕು ತಾಗಿದ ಬಳಿಕ ನಾನು ಕೇವಲ 10 ದಿನ ವಿಶ್ರಾಂತಿ ಪಡೆದೆ. ಪ್ಯಾರಾಸಿಟಮಾಲ್ ಮಾತ್ರೆ ಸೇರಿದಂತೆ ಯಾವುದೇ ಔಷಧಿಯನ್ನು ಸಹ ನಾನು ಈ ವೇಳೆ ತೆಗೆದುಕೊಳ್ಳಲಿಲ್ಲ. ನಮ್ಮಲ್ಲಿ ತಡೆದುಕೊಳ್ಳೂವ ಶಕ್ತಿಯ ಮೇಲೆ ಇದು ತೊಂದರೆ ಕೊಡುತ್ತದೆ. ಸೋಂಕು ಇದೊಂದು ಸಮಾನ್ಯ ಜ್ವರ ಅಷ್ಟೇ ಎಂದು ತಾವು ಅನುಭವಿಸಿದ ತೊಳಲಾಟದ ಬಗ್ಗೆ ತಂಡದ ಆಟಗಾರರಿಗೂ ರವಿಶಾಸ್ತ್ರಿ ಮಾಹಿತಿ ನೀಡಿದರು.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕನೇ ಟೆಸ್ಟ್ ಸರಣಿ ವೇಳೆ ಶಾಸ್ತ್ರಿ, ಭರತ್, ಶ್ರೀಧರ್ ಅಲ್ಲದೆ ಭಾರತದ ಇಬ್ಬರು ಫಿಸಿಯೋಗಳೂ ಕೂಡ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ನಾಲ್ಕನೇ ಟೆಸ್ಟ್ ವೇಳೆ ಈ ಮೂವರ ಸಹಾಯ ಭಾರತಕ್ಕೆ ದೊರೆತಿರಲಿಲ್ಲ. ಅಷ್ಟೇ ಅಲ್ಲ, ಐದನೇ ಟೆಸ್ಟ್ ಪಂದ್ಯದ ವೇಳೆ ಇಬ್ಬರು ಫಿಸಿಯೋಗಳೂ ಪಾಸಿಟಿವ್ ಬಂದಿದ್ದರಿಂದ ಐದನೇ ಟೆಸ್ಟ್ ಪಂದ್ಯವನ್ನು ರದ್ದು ಮಾಡಲಾಯಿತು.