ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ಗಾಯಕ್ಕೊಳಗಾಗಿ ಅಯ್ಯರ್ ಸಂಪೂರ್ಣ ಚೇತರಿಸಿಕೊಂಡಿದ್ದು, ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಬಹುದು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹಾಗಾಗಿ, ಯುಎಇಯಲ್ಲಿ ಮುಂದಿನ ತಿಂಗಳಿನಿಂದ ಪುನಾರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲಿದ್ದಾರೆ.
26 ವರ್ಷದ ಬ್ಯಾಟ್ಸ್ಮನ್ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದರು. ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದ ಐಪಿಎಲ್ನಿಂದಲೂ ಹೊರಗುಳಿದಿದ್ದರು. ಹಾಗಾಗಿ, ಡೆಲ್ಲಿ ತಂಡದ ನಾಯಕತ್ವ ಜವಾಬ್ದಾರಿಯನ್ನು ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ರಿಷಭ್ ಪಂತ್ಗೆ ವಹಿಸಲಾಗಿತ್ತು. ಇದೀಗ ಶ್ರೇಯಸ್ ಅಯ್ಯರ್ ಸಂಪೂರ್ಣ ಚೇತರಿಸಿಕೊಂಡಿರುವ ಕಾರಣ ಯುಎಇನಲ್ಲಿ ಮತ್ತೆ ಡೆಲ್ಲಿ ತಂಡ ಸೇರಿಕೊಳ್ಳಲಿದ್ದಾರೆ. ನಾಯಕತ್ವಕ್ಕೂ ಮರಳುವ ಸಾಧ್ಯತೆಯಿದೆ.
ಪುನಶ್ಚೇತನ ಶಿಬಿರದಲ್ಲಿ ಶ್ರೇಯಸ್ ಅಯ್ಯರ್ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ಅವರು ಬೆಂಗಳೂರಿನ ಎನ್ಸಿಎನಲ್ಲಿ ಒಂದು ವಾರ ಉಳಿದು ಫಿಟ್ನೆಸ್ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಅವರ ಎಲ್ಲ ವೈದ್ಯಕೀಯ ಮತ್ತು ದೈಹಿಕ ನಿಯತಾಂಕಗಳನ್ನು ಆಧರಿಸಿ, ಈಗ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಸಮರ್ಥರಾಗಿದ್ದಾರೆ ಎಂದು ಎನ್ಸಿಎ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೇಯಸ್ ಅಯ್ಯರ್ ಭಾರತದ ಪರ 22 ಏಕದಿನ ಮತ್ತು 29 ಟಿ-20 ಪಂದ್ಯಗಳನ್ನಾಡಿದ್ದಾರೆ. ಭಾರತದ ಸೀಮಿತ ಓವರ್ಗಳ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಅವರು ಟಿ20 ವಿಶ್ವಕಪ್ ವೇಳೆ ತಂಡಕ್ಕೆ ಮರಳುವ ಆಲೋಚನೆಯಲ್ಲಿದ್ದಾರೆ.
ಇದನ್ನು ಓದಿ:ಕನ್ಫರ್ಮ್ : ಠಾಕೂರ್ 2ನೇ ಟೆಸ್ಟ್ಗೆ ಅಲಭ್ಯ, 3ನೇ ಪಂದ್ಯಕ್ಕೆ ಮರಳುವ ಸಾಧ್ಯತೆ