ಹೈದರಾಬಾದ್: ಗುಜರಾತ್ ಟೈಟಾನ್ಸ್ನಿಂದ ಮುಂಬೈ ಇಂಡಿಯನ್ಸ್ ತಂಡ ಸೇರಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆಡುವುದೇ ಅನುಮಾನ ಎಂಬ ಮಧ್ಯೆ ಮತ್ತೊಂದು ಅಚ್ಚರಿಯ ವರದಿ ಹೊರಬಿದ್ದಿದೆ. ಮುಂಬೈ ತಂಡ ಹಾರ್ದಿಕ್ ಅವರನ್ನು ಪಡೆಯಲು ಬರೋಬ್ಬರಿ 100 ಕೋಟಿ ರೂಪಾಯಿಯನ್ನು ಗುಜರಾತ್ಗೆ ನೀಡಿದೆ ಎಂಬುದು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯಾರನ್ನು ಮಿನಿ ಹರಾಜಿಗೂ ಮೊದಲು ತಂಡ 15 ಕೋಟಿ ರೂಪಾಯಿ ನೀಡಿ ಎರವಲಾಗಿ ಪಡೆದುಕೊಂಡಿದೆ. ಬಳಿಕ ಮುಂಬೈ ತಂಡದ ನಾಯಕರನ್ನಾಗಿ ಕೂಡ ಘೋಷಣೆ ಮಾಡಿದೆ. ಐದು ಬಾರಿ ಕಪ್ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾರನ್ನು ಕ್ಯಾಪ್ಟನ್ಸಿಯಿಂದ ಕೆಳಗಿಸಲಾಗಿದೆ.
ಇಷ್ಟೆಲ್ಲ ವಿದ್ಯಮಾನಗಳ ನಡುವೆ ಬೆಚ್ಚಿಬೀಳುವ ಸಂಗತಿಯಾಗಿ, ಹಾರ್ದಿಕ್ ಖರೀದಿಗೆ ಮುಂಬೈ 100 ಕೋಟಿ ರೂಪಾಯಿ ನೀಡಿದೆ ಎಂದು ವರದಿಯಾಗಿದೆ. ಆದರೆ, ಅಧಿಕೃತವಾಗಿ ನಡೆದ ವ್ಯವಹಾರವಲ್ಲ. ಎರಡು ಫ್ರಾಂಚೈಸಿಗಳ ನಡುವೆ ಗೌಪ್ಯವಾಗಿ ಹಣಸಂದಾಯವಾಗಿದೆ ಎಂದು ತಿಳಿದುಬಂದಿದೆ.
ದೊಡ್ಡ ಮೊತ್ತ ನೀಡಲು ಇದೇ ಕಾರಣ: ಮುಂಬೈ ತಂಡ ಹಾರ್ದಿಕ್ಗಾಗಿ 100 ಕೋಟಿ ರೂಪಾಯಿ ಖರ್ಚು ಮಾಡಲು ಪ್ರಮುಖ ಕಾರಣವಿದೆಯಂತೆ. 2025 ರಲ್ಲಿ ಮೆಗಾ ಹರಾಜು ನಡೆಯಲಿದ್ದು, ಆ ವೇಳೆಗೆ ಫ್ರಾಂಚೈಸಿಯಲ್ಲಿ ನಾಲ್ವರು ಮಾತ್ರ ಉಳಿದುಕೊಳ್ಳಲು ಅವಕಾಶವಿರುತ್ತದೆ. ಆಗ ಗುಜರಾತ್ ಹಾರ್ದಿಕ್ ಅವರನ್ನು ತಾನೇ ಉಳಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಈಗಲೇ ಕ್ರಿಕೆಟಿಗನನ್ನು ಬಿಕರಿ ಮಾಡಿದೆ ಎಂದು ವರದಿಯಲ್ಲಿದೆ. ಇದಲ್ಲದೇ, ಹಾರ್ದಿಕ್ ಪಾಂಡ್ಯ ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕರಾಗಲಿದ್ದಾರೆ ಎಂಬ ನಿರೀಕ್ಷೆಯೂ ಇನ್ನೊಂದು ಕಾರಣವಾಗಿದೆ. ಅದಕ್ಕಾಗಿಯೇ ಮುಂಬೈ ಹಾರ್ದಿಕ್ಗೆ ಈಗಲೇ ನಾಯಕತ್ವ ಪಟ್ಟ ಕಟ್ಟಿದೆ.
ಪರ್ಸ್ ಮೌಲ್ಯ ಹೆಚ್ಚಳ: ಹಾರ್ದಿಕ್ ಪಾಂಡ್ಯರನ್ನು ಗುಜರಾತ್ ಟೈಟಾನ್ಸ್ ಮಾರಾಟ ಮಾಡಿದ್ದರಿಂದ ಅದರ ಪರ್ಸ್ ಮೌಲ್ಯ 15 ಕೋಟಿ ರೂಪಾಯಿ ಹೆಚ್ಚಿದೆ. ಆದರೆ, 100 ಕೋಟಿ ರೂಪಾಯಿ ವಹಿವಾಟಿನ ಬಗ್ಗೆ ತಂಡ ಮ್ಯಾನೇಜ್ಮೆಂಟ್ ಎಲ್ಲಿಯೂ ಹೇಳಿಕೊಂಡಿಲ್ಲ. ಇದು ಹಣಕಾಸು ವರ್ಷದ ಕೊನೆಯಲ್ಲಿ ಸಿವಿ ಕ್ಯಾಪಿಟಲ್‌ನ ಬ್ಯಾಲೆನ್ಸ್ ಶೀಟ್‌ನಲ್ಲಿ ಕಾಣಸಿಗಲಿದೆ ಎಂದು ಹೇಳಲಾಗಿದೆ.
ಪಾದದ ಗಾಯಕ್ಕೀಡಾಗಿ ವಿಶ್ವಕಪ್‌ನ ಮಧ್ಯದಿಂದ ಹೊರಬಿದ್ದಿದ್ದ ಹಾರ್ದಿಕ್ ಪಾಂಡ್ಯ ಜನವರಿಯಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ ಸರಣಿಗೆ ಲಭ್ಯರಾಗುವ ನಿರೀಕ್ಷೆಯಿದೆ. ಆಗ ಟೀಂ ಇಂಡಿಯಾವನ್ನು ಹಾರ್ದಿಕ್ ಮುನ್ನಡೆಸಲಿದ್ದಾರೆ. ಜನವರಿ 11 ರಿಂದ ಭಾರತ ತವರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಮುಂದಿನ ವರ್ಷ ಜೂನ್ನಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿದೆ.
ಇದನ್ನೂ ಓದಿ: ಐಪಿಎಲ್: ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕ