ಕಾನ್ಪುರ: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರಿದೆ.
ದಿಗ್ಗಜರ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶ ಸದ್ವಿನಿಯೋಗ ಮಾಡಿಕೊಂಡಿರುವ ಶ್ರೇಯಸ್ ಅಯ್ಯರ್ಗೆ ಮುಂಬೈನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಗುವುದೋ ಇಲ್ಲವೋ ಎನ್ನುವುದು ಕುತೂಹಲಕಾರಿ ಸಂಗತಿ.
ವಿರಾಟ್ ಕೊಹ್ಲಿ, ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆದಿದ್ದ ಶ್ರೇಯಸ್ ಅಯ್ಯರ್ ಮೊದಲ ಇನ್ನಿಂಗ್ಸ್ನಲ್ಲಿ 105 ಮತ್ತು 2ನೇ ಇನ್ನಿಂಗ್ಸ್ನಲ್ಲಿ 65 ರನ್ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ 2ನೇ ಟೆಸ್ಟ್ ಪಂದ್ಯಕ್ಕೆ ಹಿಂದುರಿಗಿದರೆ ಶ್ರೇಯಸ್ ಆಡಲಿದ್ದಾರೆ ಎಂಬ ಪ್ರಶ್ನೆಗೆ ರಹಾನೆ ಮ್ಯಾನೇಜ್ಮೆಂಟ್ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.
ನಾವು ಈ ಪಂದ್ಯವನ್ನು ಗೆಲ್ಲುವುದಕ್ಕೆ ನಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಕೊನೆಯವರೆಗೆ ಮಾಡಿದೆವು. ಸ್ಪಿನ್ನರ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಶ್ರೇಯಸ್ ಅಯ್ಯರ್ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೆ. ಟೆಸ್ಟ್ ಕ್ರಕೆಟ್ ಆಡುವುದಕ್ಕೆ ಸಾಕಷ್ಟು ಸಮಯದಿಂದ ಕಾಯುತ್ತಿದ್ದ ಅವರು ಸಿಕ್ಕ ಈ ಅವಕಾಶವನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಮುಂದಿನ ಪಂದ್ಯದಲ್ಲಿ ಕೊಹ್ಲಿ ಆಡಲಿದ್ದಾರೆ. ಹಾಗಾಗಿ ಮುಂದಿನ ಪಂದ್ಯದ ಆಯ್ಕೆಯ ಬಗ್ಗೆ ನಾನೇನು ಹೇಳಲು ಸಾಧ್ಯವಿಲ್ಲ. ಆಯ್ಕೆಯ ವಿಚಾರ ಮ್ಯಾನೇಜ್ಮೆಂಟ್ ನಿರ್ಧರಿಸಲಿದೆ ಎಂದು ಪಂದ್ಯದ ಬಳಿಕ ರಹಾನೆ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ತಂಡಕ್ಕೆ ಆಗಮಿಸಿದ ನಂತರ ಶ್ರೇಯಸ್ ಅಯ್ಯರ್ಗೆ ಅವಕಾಶ ನೀಡಿ ಫಾರ್ಮ್ನಲ್ಲಿಲ್ಲದ ರಹಾನೆಯನ್ನೇ ಹೊರಹಾಕಬಹುದು ಎನ್ನಲಾಗುತ್ತಿದೆ. ಒಂದು ವೇಳೆ ರಹಾನೆ ಅವಕಾಶ ನೀಡಿದರೆ ಅನಿವಾರ್ಯವಾಗಿ ಅಯ್ಯರ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಬೇಕಾಗಬಹುದು.
ಇದನ್ನೂ ಓದಿ: ಭಾರತದಲ್ಲಿ 2010ರ ಬಳಿಕ ಮೊದಲ ಬಾರಿಗೆ ಸೋಲು ತಪ್ಪಿಸಿಕೊಂಡು ಡ್ರಾ ಸಾಧಿಸಿದ ಕಿವೀಸ್!