ಮೈಸೂರು: ನಾಯಕ ಕರುಣ್ ನಾಯರ್ ಅವರ ಸ್ಫೋಟಕ ಬ್ಯಾಟಿಂಗ್ (91*) ಮತ್ತು ವಿಕೆಟ್ ಕೀಪರ್ ನಿಹಾಲ್ ಉಳ್ಳಾಲ್ (48*) ಅವರ ತಾಳ್ಮೆಯ ಆಟದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಅಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿಯ ಏಳನೇ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಅಯ್ದುಕೊಂಡ ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್ ಪಡೆಯನ್ನು 140 ರನ್‌ಗೆ ಕಟ್ಟಿ ಹಾಕಿತು. ನಂತರ ಸಾಧಾರಣ ಮೊತ್ತವನ್ನು ಇನ್ನೂ 25 ಎಸೆತ ಬಾಕಿ ಇರುವಾಗಲೇ ಯಾವುದೇ ವಿಕೆಟ್ ಕಳೆದುಕೊಳ್ಳದೆ ವಾರಿಯರ್ಸ್ ತಲುಪಿತು.
ಕರುಣ್ ನಾಯರ್ ಹಿಂದಿನ ಎರಡು ಪಂದ್ಯಗಳಲ್ಲಿ ತಮ್ಮ ನೈಜ ಸಾಮರ್ಥ್ಯ ತೋರುವಲ್ಲಿ ವಿಫಲರಾಗಿದ್ದರು. ಆದರೆ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ 52 ಎಸೆತಗಳನ್ನೆದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 91 ರನ್ ಗಳಿಸಿದರು. ಇನ್ನೊಂದೆಡೆ, ನಿಹಾಲ್ ಉಳ್ಳಾಲ್ ನಾಯಕನಿಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡುತ್ತ 43 ಎಸೆತಗಳನ್ನೆದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 48 ರನ್ ಸಿಡಿಸಿದರು. ಟೂರ್ನಿಯಲ್ಲಿ ಮೊದಲ ಬಾರಿಗೆ ತಂಡವೊಂದು ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿದ ಹೆಗ್ಗಳಿಕೆಗೆ ಮೈಸೂರು ವಾರಿಯರ್ಸ್ ಪಾತ್ರವಾಯಿತು.
ಟೈಗರ್ಸ್ ಸಾಧಾರಣ ಮೊತ್ತ: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಹುಬ್ಬಳ್ಳಿ ಟೈಗರ್ಸ್ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಆಟಗಾರರ ಉತ್ಸಾಹವೆಲ್ಲ ನಿನ್ನೆ ಬೆಂಗಳೂರು ವಿರುದ್ಧದ ಪಂದ್ಯದಲ್ಲೇ ಕೊನೆಗೊಂಡಿತ್ತು ಎಂಬಂತೆ ಬ್ಯಾಟ್ಸ್‌ಮನ್‌ಗಳು ಪ್ರದರ್ಶನ ತೋರಿದರು. ಪರಿಣಾಮ, ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 140 ರನ್ ಗಳಿಸಿತು. ಲವ್‌ನೀತ್ ಸಿಸೋಡಿಯಾ (38), ಲಿಯಾನ್ ಖಾನ್ (26), ಹಾಗೂ ತುಷಾರ್ ಸಿಂಗ್ ಅವರ ಅಬ್ಬರದ ಅಜೇಯ 38 ರನ್ ಹುಬ್ಬಳ್ಳಿ ಟೈಗರ್ಸ್‌ನ ಬ್ಯಾಟಿಂಗ್ ಹೈಲೈಟ್ಸ್. ಸಿಸೋಡಿಯಾ ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಸೇರಿತ್ತು. ಜಿ.ನವೀನ್ (5) ಮತ್ತು ಶಿವಕುಮಾರ್ (6) ಮತ್ತೊಮ್ಮೆ ವೈಫಲ್ಯದ ಆಟ ಮುಂದುವರಿಸಿದರು.
ಸದಾ ಅಬ್ಬರದ ಆಟಕ್ಕೆ ಮನಸ್ಸು ಮಾಡುವ ಲಿಯಾನ್ ಖಾನ್ 24 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಕುಸಿದ ತಂಡಕ್ಕೆ ನೆರವಾದರು. ಹುಬ್ಬಳ್ಳಿ ಟೈಗರ್ಸ್ ತಂಡದ ರನ್ ಗಳಿಕೆಯಲ್ಲಿ ಹಿನ್ನಡೆ ಕಾಣಲು ಭರವಸೆಯ ಆಟಗಾರ ಶಿಶಿರ್ ಭವಾನೆ ಗಾಯಗೊಂಡಿದ್ದು ಮುಖ್ಯ ಕಾರಣವಾಯಿತು.
ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 51 ರನ್ ಗಳಿಸಿ ಜಯದ ರೂವಾರಿ ಎನಿಸಿದ್ದ ನಾಯಕ ಅಭಿಮನ್ಯು ಮಿಥುನ್ ಅವರು ಕೇವಲ 7 ರನ್ ಗಳಿಸಿದರು. ಮಿಥುನ್ ಅವರ ಇಂದಿನ ಇನ್ನಿಂಗ್ಸ್ ನಿನ್ನೆಯ ಇನ್ನಿಂಗ್ಸ್‌ಗೆ ವಿರುದ್ಧವಾಗಿತ್ತು. ಹುಬ್ಬಳ್ಳಿಯ ಇನ್ನಿಂಗ್ಸ್‌ಗೆ ಜೀವ ತುಂಬಿದವರು ತುಷಾರ್ ಸಿಂಗ್. ಕೇವಲ 18 ಎಸೆತಗಳನ್ನು ಎದುರಿಸಿದ ಅವರು 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 36 ರನ್ ಸಿಡಿಸಿ ಪ್ರೇಕ್ಷಕರನ್ನು ಕೆಲ ಹೊತ್ತು ರಂಜಿಸಿದರು. ಕೊನೆಯ 14 ಎಸೆತಗಳಲ್ಲಿ 28 ರನ್ ದಾಖಲಾಯಿತು.
ಮೈಸೂರು ವಾರಿಯರ್ಸ್ ಮನೆಯಂಗಣದಲ್ಲಿ ಮತ್ತೊಮ್ಮೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಆಲ್ರೌಂಡರ್ ಶ್ರೇಯಸ್ ಗೋಪಾಲ್ 22 ರನ್‌ಗೆ 2 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ವಿದ್ಯಾಧರ ಪಾಟೀಲ್, ಆದಿತ್ಯ ಗೋಯಲ್ ಹಾಗೂ ಶುಭಾಂಗ್ ಹೆಗ್ಡೆ ತಲಾ 1 ವಿಕೆಟ್ ಗಳಿಸಿ ಹುಬ್ಬಳ್ಳಿಯ ರನ್ ಗಳಿಕೆಗೆ ಕಡಿವಾಣ ಹಾಕಿದರು.
ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 140: (ಸಿಸೋಡಿಯಾ 38, ಲಿಯಾನ್ ಖಾನ್ 26, ತುಷಾರ್ ಸಿಂಗ್ 36* ಶ್ರೇಯಸ್ ಗೋಪಾಲ್ 22ಕ್ಕೆ 2)
ಮೈಸೂರು ವಾರಿಯರ್ಸ್: 15.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 141 : (ಕರುಣ್ ನಾಯರ್ 91*, ನಿಹಾಲ್ ಉಳ್ಳಾಲ್ 48*) ಮೈಸೂರು ವಾರಿಯರ್ಸ್‌ಗೆ 10 ವಿಕೆಟ್ ಜಯ.
ಇದನ್ನೂ ಓದಿ : ಮಹಾರಾಜ ಟ್ರೋಫಿ: ಮನೀಶ್ ಪಾಂಡೆ ಜವಾಬ್ದಾರಿಯುತ ಆಟ, ಗುಲ್ಬರ್ಗ ಮಿಸ್ಟಿಕ್ಸ್‌ಗೆ ಗೆಲುವು