ನವದೆಹಲಿ: ಇಂಗ್ಲೆಂಡ್ ಸ್ಫೋಟಕ ಬ್ಯಾಟರ್ ಜೇಸನ್ ರಾಯ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಬಂದಿದ್ದು, ಲೀಗ್ ಆರಂಭಕ್ಕೂ ಮುನ್ನವೇ ಟೈಟನ್ಸ್ಗೆ ಆಘಾತ ತಂದಿದೆ. ಬಯೋಬಬಲ್ ಆಯಾಸವನ್ನು ತಪ್ಪಿಸಿಕೊಳ್ಳುವುದಕ್ಕೆ ಈ ನಿರ್ಧಾರ ತೆಗದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ವರದಿಗಳ ಪ್ರಕಾರ ಜೇಸನ್ ರಾಯ್ ಗುಜರಾತ್ ಫ್ರಾಂಚೈಸಿಗೆ ಕಳೆದ ವಾರವೇ ಈ ನಿರ್ಧಾರ ತಿಳಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಫ್ರಾಂಚೈಸಿ ಇದುವರೆಗೆ ಅವರ ಬದಲೀ ಆಟಗಾರನನ್ನು ಘೋಷಿಸಿಲ್ಲ. ದಕ್ಷಿಣ ಆಫ್ರಿಕಾ ಮೂಲದ ಇಂಗ್ಲಿಷ್ ಕ್ರಿಕೆಟಿಗನನ್ನು ಮೆಗಾ ಹರಾಜಿನಲ್ಲಿ ಟೈಟನ್ಸ್ ಮೂಲಬೆಲೆ 2 ಕೋಟಿ ರೂ.ಗಳಿಗೆ ಖರೀದಿಸಿತ್ತು.
ಲೀಗ್ ಆರಂಭಕ್ಕೆ ಮೂರು ವಾರಗಳಿರುವಾಗ ರಾಯ್ ಈ ದಿಢೀರ್ ನಿರ್ಧಾರ ತೆಗೆದುಕೊಂಡಿರುವುದು ಗುಜರಾತ್ ಫ್ರಾಂಚೈಸಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಶುಬ್ಮನ್ ಗಿಲ್ ಹೊರತುಪಡಿಸಿದರೆ ರಾಯ್ ತಂಡದಲ್ಲಿದ್ದ ಏಕೈಕ ಸ್ಪೆಷಲಿಸ್ಟ್ ಓಪನರ್ ಆಗಿದ್ದರು.
ಇಂಗ್ಲೀಷ್ ಬ್ಯಾಟರ್ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರ ಹೋಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2022ರ ಆವೃತ್ತಿಯಲ್ಲೂ ವೈಯಕ್ತಿಕ ಕಾರಣ ನೀಡಿ ಹೊರ ಹೋಗಿದ್ದರು. ಆಗ ಅವರನ್ನು 1.5 ಕೋಟಿ ರೂ. ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು.
ರಾಯ್ ಕಳೆದ ವಾರ ಮುಗಿದ ಪಾಕಿಸ್ತಾನ ಸೂಪರ್ ಲೀಗ್ನಲ್ಲೂ ಬಯೋಬಬಲ್ನಲ್ಲಿ ಆಡಿದ್ದರು. 6 ಪಂದ್ಯಗಳನ್ನಾಡಿದ್ದ ಅವರು 1ಶತಕ ಮತ್ತು 2 ಅರ್ಧಶತಕ ಸೇರಿ 303 ರನ್ಗಳಿಸಿದ್ದರು.
15ನೇ ಆವೃತ್ತಿಯ ಐಪಿಎಲ್ ಮಾರ್ಚ್ 26 ರಿಂದ ಆರಂಭವಾಗಲಿದೆ. ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ. ಮುಂಬೈನ 3 ಮತ್ತು ಪುಣೆಯ 1 ಸ್ಟೇಡಿಯಂನಲ್ಲಿ ಟೂರ್ನಮೆಂಟ್ ಜರುಗಲಿದೆ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್ನಲ್ಲಿ ಅವಕಾಶ ಸಿಗಲು ಕಾರಣವಾದ ಘಟನೆ ನೆನೆದ ಬುಮ್ರಾ