ಮುಂಬೈ: ಹೊಸ ಫ್ರಾಂಚೈಸಿಗಳ ಎಲ್ಲಾ ರೀತಿಯ ಕರಾರುಗಳು ಮಂಗಳವಾರ ಮುಗಿದಿದ್ದು, ತಮ್ಮ ಫ್ರಾಂಚೈಸಿ ಹಕ್ಕುಪತ್ರಗಳನ್ನು ಪಡೆದುಕೊಂಡಿವೆ. ಇದೀಗ ಜನವರಿ 22ರೊಳಗೆ ತಮ್ಮ ರಿಟೈನ್ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ಸೂಚನೆ ನೀಡಿದೆ.
ಅಕ್ಟೋಬರ್ನಲ್ಲಿ ನಡೆದಿದ್ದ ಬಿಡ್ನಲ್ಲಿ ಲಖನೌ ಫ್ರಾಂಚೈಸಿಯನ್ನು ಆರ್ಪಿಎಸ್ಜಿ ಗ್ರೂಪ್ 7,090 ಕೋಟಿ ರೂಗಳಿಗೆ ಖರೀದಿಸಿತ್ತು. ಅಹ್ಮದಾಬಾದ್ ತಂಡವನ್ನು ಸಿವಿಸಿ ಕ್ಯಾಪಿಟಲ್ಸ್ 5,625 ಕೋಟಿ ರೂ ನೀಡಿ ಪಡೆದುಕೊಂಡಿದೆ.
ಈ ಎರಡೂ ತಂಡಗಳಿಗೆ ತಲಾ ಮೂವರು ಆಟಗಾರರನ್ನು ಮೆಗಾ ಹರಾಜಿಗೂ ಮುನ್ನ ಖರೀದಿಸುವ ಅವಕಾಶವಿದೆ. ಹಾಗಾಗಿ ಜನವರಿ 22, ಸಾಯಂಕಾಲ 5 ಗಂಟೆಯೊಳಗೆ ತಮ್ಮ ರಿಟೈನ್ ಆಟಗಾರರನ್ನು ಘೋಷಿಸಲು ಬಿಸಿಸಿಐ ಫ್ರಾಂಚೈಸಿಗಳಿಗೆ ತಿಳಿಸಿದೆ.
ಈ ತಂಡಗಳು ಇಬ್ಬರು ಭಾರತೀಯ ಆಟಗಾರರನ್ನು ಮತ್ತು ಒಬ್ಬ ವಿದೇಶಿ ಆಟಗಾರನನ್ನು ತಂಡಕ್ಕೆ ನೇರವಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಹೊಂದಿವೆ. ಐಪಿಎಲ್ ಸಲಹಾ ಸಮಿತಿಯ ಪ್ರಕಾರ, ಹೊಸ ತಂಡಗಳು ಮೂವರು ಆಟಗಾರರನ್ನು 33 ಕೋಟಿ ರೂ ವೆಚ್ಚ ಮಾಡಿ ಖರೀದಿಸಬಹುದು. ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡರೆ 15, 11 ಮತ್ತು 7 ಕೋಟಿ ರೂ.ಗಳನ್ನು ನೀಡಿ ಖರೀದಿಸಬಹುದಾಗಿದೆ.
ಇಬ್ಬರನ್ನು ಆಯ್ಕೆ ಮಾಡಿದರೆ 14 ಮತ್ತು 10 ಹಾಗೂ ಕೇವಲ ಒಬ್ಬ ಆಟಗಾರನನ್ನು ಆಯ್ಕೆ ಮಾಡಿಕೊಂಡರೆ 14 ಕೋಟಿ ರೂ ನೀಡಲು ಅವಕಾಶವಿದೆ. ಅನ್ಕ್ಯಾಪ್ ಆಟಗಾರನಾದರೆ ಗರಿಷ್ಠ 4 ಕೋಟಿ ರೂ ನೀಡಲು ಅವಕಾಶವಿದೆ. ಒಟ್ಟು 90 ಕೋಟಿ ರೂಗಳನ್ನು ಪ್ರತಿಯೊಂದು ತಂಡಕ್ಕೂ ಆಟಗಾರರನ್ನು ಖರೀದಿಸಲು ನಿಗದಿಪಡಿಸಲಾಗಿದೆ.
ವರದಿಗಳ ಪ್ರಕಾರ, ಲಖನೌ ಕೆ.ಎಲ್.ರಾಹುಲ್ ಅವರನ್ನು ಖರೀದಿಸಿ ನಾಯಕನನ್ನಾಗಿ ನೇಮಿಸುತ್ತದೆ ಎನ್ನಲಾಗುತ್ತಿದೆ. ಇನ್ನು ವಿದೇಶಿ ಆಟಗಾರರ ವಿಭಾಗದಲ್ಲಿ ಸಂಜಯ್ ಗೋಯೆಂಕಾ ತಂಡ ಕಗಿಸೊ ರಬಾಡ ಮತ್ತು ಸ್ಟೋಯ್ನಿಸ್ ಜೊತೆ ಮಾತುಕತೆ ನಡೆಸಿದ್ದು, ಇಬ್ಬರಲ್ಲಿ ಒಬ್ಬರನ್ನು ಖರೀದಿಸುವ ಸಾಧ್ಯತೆಯಿದೆ.
ಇತ್ತ ಅಹ್ಮದಾಬಾದ್ ತಂಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನಾಯಕನನ್ನಾಗಿ ಘೋಷಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇವರ ಜೊತೆಗೆ, ರಶೀದ್ ಮತ್ತು ಇಶಾನ್ ಕಿಶನ್ ತಂಡ ಸೇರಿಕೊಳ್ಳಬಹುದು ಎನ್ನಲಾಗಿದೆ. ಆದರೆ ಆಟಗಾರರ ಖರೀದಿ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜಿಗೆ ದಿನಾಂಕ ನಿಗದಿ ಮಾಡಿದ ಬಿಸಿಸಿಐ