ಅಹಮದಾಬಾದ್: ಪ್ರಸ್ತುತ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಮಾಡುತ್ತಿದ್ದಾರೆ. ಅವರ ಬೌಲಿಂಗ್ ವೇಗವನ್ನು ಹೆಚ್ಚಿಸಲು ತಾವು ಕೆಲಸ ಮಾಡುವುದಾಗಿ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್ ಹೇಳಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಒಂದು ಓವರ್‌ನಲ್ಲಿ 31 ರನ್ ಸೇರಿದಂತೆ ಒಟ್ಟು 48 ರನ್ ಕೊಟ್ಟಿದ್ದರು. ನಾಲ್ಕು ದಿನಗಳ ನಂತರ ನಿನ್ನೆ ನಡೆದ ಗುಜರಾತ್ ಎದುರಿನ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಕಮ್ಬ್ಯಾಕ್ ಮಾಡಿದ್ದು, ಎರಡು ಓವರ್‌ನಲ್ಲಿ 9 ರನ್ ಮಾತ್ರ ಬಿಟ್ಟುಕೊಟ್ಟು 1 ವಿಕೆಟ್ನ್ನು ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ 55 ರನ್ ಸೋಲು ಕಂಡ ನಂತರ ಮಾತನಾಡಿದ ಬಾಂಡ್," ಕಳೆದ ಪಂದ್ಯದಲ್ಲಿ ಏನಾಯಿತು ಎಂಬುದರ ನಂತರ, ಅವರು ಇಂದು ಉತ್ತಮವಾಗಿ ಆಡಿದ್ದಾರೆ. ನಾವು ಅವರ ವೇಗವನ್ನು ಹೆಚ್ಚಿಸುವ ಕೆಲಸ ಮಾಡುತ್ತೇವೆ, ಇಂದು ಅವರು ಉತ್ತಮ ನಿರ್ವಹಣೆಯನ್ನು ಮಾಡಿದ್ದಾರೆ" ಎಂದರು.
ತಮ್ಮ ವೃತ್ತಿಜೀವನದ ಮೊದಲ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ, ಅರ್ಜುನ್ ಮೊದಲ ಮತ್ತು ಮೂರನೇ ಓವರ್ ಅನ್ನು ಬೌಲ್ ಮಾಡಿದರು. ಎರಡು ಓವರ್‌ನಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟರು. ನಂತರ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೊನೆಯ ಓವರ್‌ನಲ್ಲಿ 20 ರನ್ ಬೇಕಿದ್ದಾಗ ಬೌಲಿಂಗ್ ಮಾಡಿದ ಅರ್ಜುನ್ ಕೇವಲ 6 ರನ್ ಬಿಟ್ಟುಕೊಟ್ಟು 2 ವಿಕೆಟ್ ಉರುಳಿಸಿದ್ದರು.
"ನಾವು ಸಾಕಷ್ಟು ಸರಳವಾದ ಯೋಜನೆಗಳನ್ನು ಹೊಂದಿದ್ದೇವೆ. ನಾವು ಒಂದು ಪ್ರದೇಶದಲ್ಲಿ ಹೇಗೆ ಬೌಲ್ ಮಾಡಿದ್ದೇವೆ. ಒಂದು ಓವರ್‌ನಲ್ಲಿ ಹೆಚ್ಚು ರನ್ ಬಂದಿದೆ, ಆದರೆ ನಂತರ ಓವರ್ ನಿಯಂತ್ರಣ ಮಾಡಿದ್ದೇವೆ. ಇಂದಿನ ಸೋಲು ನಿರಾಶದಾಯಕ. ಬೃಹತ್ ಮೊತ್ತವನ್ನು ಬೆನ್ನತ್ತಲು ನಾವು ಒಂದು ಹೆಜ್ಜೆ ಹಿಂದೆ ಇದ್ದೆವು" ಎಂದಿದ್ದಾರೆ.
"ಗುಜರಾತ್ ಪಂದ್ಯದಲ್ಲಿ 100/4 ಪಡೆದಿದ್ದೆವು ಆದರೆ ನಂತರ ನಾವು ಕೆಲ ಓವರ್ಗಳಲ್ಲಿ ನಿಯಂತ್ರಣ ಕಳೆದುಕೊಂಡೆವು. ಡೇವಿಡ್ ಮಿಲ್ಲರ್ ಮತ್ತು ಅಭಿನವ್ ಮನೋಹರ್ ತಂಡದ ಬೌಲಿಂಗ್ ವ್ಯವಸ್ಥೆಯ ಮೇಲೆ ಹೆಚ್ಚು ಡ್ಯಾಮೇಜ್ ಮಾಡಿದರು. ನಾವು ನಮ್ಮ ನಿರ್ಧಾರ ಮತ್ತು ನಮ್ಮ ಕಾರ್ಯಗತಗೊಳಿಸುವಿಕೆಯಲ್ಲಿ ಉತ್ತಮವಾಗಿರಬೇಕು. ಸಂಕ್ಷಿಪ್ತವಾಗಿ, ಇದು ನಮಗೆ ಕಠಿಣ ದಿನವಾಗಿತ್ತು" ಅವರು ಸೋಲಿನ ಬಗ್ಗೆ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ಬೌಲಿಂಗ್ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು, ಇದು ಎಂಐ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಿಸಿತು. ಹಾರ್ದಿಕ್ ಮತ್ತು ಮೊಹಮ್ಮದ್ ಶಮಿ ಬೌಲ್ ಮಾಡುವಾಗ ಪಿಚ್ ವಿಭಿನ್ನವಾಗಿ ಸ್ವಿಂಗ್ಗಳನ್ನು ಉಂಟುಮಾಡುತ್ತಿತ್ತು. ಇದು ಬ್ಯಾಟರ್ಗಳಿಗೆ ತಮ್ಮ ಶಾಟ್ ಮೇಲೆ ನಿಯಂತ್ರಣ ಸಾಧಿಸಲು ಕಠಿಣವಾಯಿತು ಎಂದು ಅವರು ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ವಿರಾಟ್ ಯಾವಾಗಲೂ ಅಡೆತಡೆಗಳನ್ನು ಮೀರಲು ಬಯಸುವ ವ್ಯಕ್ತಿ : ಸಂಜಯ್ ಬಂಗಾರ್