ಅಹ್ಮದಾಬಾದ್, ಗುಜರಾತ್: ರಶೀದ್ ಖಾನ್ ಹ್ಯಾಟ್ರಿಕ್.. ವಿಜಯ್ ಶಂಕರ್ ವೀರೋಚಿತ ಇನ್ನಿಂಗ್ಸ್.. ಇವೆಲ್ಲವನ್ನೂ ಬದಿಗೊತ್ತಿ ರಿಂಕು ಸಿಂಗ್ ಮುನ್ನುಗ್ಗಿದರು. ಅವರ ಬ್ಯಾಟಿಂಗ್ ವೀರಾವೇಶದಿಂದ, ಅವರು ಗುಜರಾತ್ ವಿರುದ್ಧ ಕೋಲ್ಕತ್ತಾಗೆ (GT vs KKR) ಅಭೂತಪೂರ್ವ ಗೆಲುವು ಧಕ್ಕಿಸಿಕೊಟ್ಟರು. ಅವರು ಆಡಿದ ಕೊನೆಯ ಏಳು ಎಸೆತಗಳಲ್ಲಿ ಆರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಐಪಿಎಲ್ 2023ರ 13 ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್ 3 ವಿಕೆಟ್‌ಗಳಿಂದ ಅದ್ಭುತ ಜಯ ಸಾಧಿಸಿತು. ಕೋಲ್ಕತ್ತಾ ಗೆಲುವಿಗೆ ಕೊನೆಯ ಓವರ್‌ನಲ್ಲಿ 29 ರನ್‌ಗಳ ಅಗತ್ಯವಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಕೆಕೆಆರ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಕೊನೆಯ ಐದು ಎಸೆತಗಳಲ್ಲಿ 5 ಸಿಕ್ಸರ್ ಬಾರಿಸುವ ಮೂಲಕ ತಮ್ಮ ತಂಡವನ್ನು ಗೆಲ್ಲಿಸಿದರು. ರಿಂಕು ಸಿಂಗ್ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 48 ರನ್‌ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು. ಈ ಇನ್ನಿಂಗ್ಸ್‌ನಲ್ಲಿ ಅವರ ಸ್ಟ್ರೈಕ್ ರೇಟ್ 228.57 ಆಗಿತ್ತು. ಈ ಇನ್ನಿಂಗ್ಸ್‌ಗಾಗಿ ಅವರು 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಪಡೆದರು.
ರಿಂಕು ಸಿಂಗ್ ಹೇಳಿದ್ದೇನು?: ನನ್ನ ತಂದೆ ಕುಟುಂಬಕ್ಕಾಗಿ ತುಂಬಾ ಶ್ರಮಿಸಿದರು. ನಮ್ಮದು ಕೃಷಿ ಕುಟುಂಬ. ಅವರು ಸಣ್ಣಪುಟ್ಟ ಕೆಲಸಗಳನ್ನು ಮಾಡಿ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಹಾಗಾಗಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಈ ಪಂದ್ಯದಲ್ಲಿ ನಾನು ಬಾರಿಸಿದ ಪ್ರತಿ ಸಿಕ್ಸರ್ ನನಗಾಗಿ ತ್ಯಾಗ ಮಾಡಿದ ಎಲ್ಲರಿಗೂ ಅರ್ಪಿಸುತ್ತೇನೆ. ಕೊನೆಯ ಓವರ್‌ನಲ್ಲಿ ಅದು ದೊಡ್ಡ ಗುರಿಯಾಗಿದ್ದರೂ.. ನಾನು ಅದನ್ನು ಸಾಧಿಸುತ್ತೇನೆ ಎಂದು ನಂಬಿದ್ದೆ. ಈ ಹಿಂದೆ ಕೂಡ ಲಖನೌ ವಿರುದ್ಧದ ಪಂದ್ಯದಲ್ಲಿ ಇದೇ ಪರಿಸ್ಥಿತಿ ಎದುರಿಸಿದ್ದೆ. ಹೆಚ್ಚು ಯೋಚಿಸಬಾರದು ಎಂದು ತಿಳಿದುಕೊಂಡಿದ್ದೆ. ಮೊದಲ ನಾಲ್ಕು ಸಿಕ್ಸರ್‌ಗಳು ಒಂದಾದರೆ, ಕೊನೆಯ ಸಿಕ್ಸರ್ ಮಾತ್ರ ಬೇರೆಯದ್ದಾಗಿತ್ತು. ಏಕೆಂದರೆ ಬ್ಯಾಕ್‌ಫೂಟ್‌ನಲ್ಲಿ ಕೊನೆಯ ಸಿಕ್ಸರ್ ಬಾರಿಸಲು ನಾನು ಪ್ರಯಾಸಪಡಬೇಕಾಯಿತು ಎಂದು ರಿಂಕು ಸಿಂಗ್ ಹೇಳಿಕೊಂಡರು.
ರಿಂಕು ಸಿಂಗ್‌ಗೆ ವಿಶೇಷ ಕರೆ..: ಪಂದ್ಯ ಸಂಭ್ರಮದಲ್ಲಿ ಮುಗಿದ ಬಳಿಕ ರಿಂಕು ಸಿಂಗ್‌ಗೆ ವಿಶೇಷ ಅತಿಥಿಯಿಂದ ಕರೆ ಬಂತು. ಕೆಕೆಆರ್‌ನ ನಿಯಮಿತ ನಾಯಕ ಶ್ರೇಯಸ್ ಅಯ್ಯರ್ ಅವರು ಗಾಯದ ಕಾರಣದಿಂದ ಹೊರಗುಳಿದಿದ್ದು, ವಿಡಿಯೋ ಕರೆ ಮೂಲಕ ರಿಂಕು ಸಿಂಗ್ ಅವರನ್ನು ಅಭಿನಂದಿಸಿದ್ದಾರೆ. ಈ ವಿಡಿಯೋವನ್ನು ಕೆಕೆಆರ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಕೆಕೆಆರ್ ಎರಡನೇ ಸ್ಥಾನ: ಮೊದಲ ಪಂದ್ಯದಲ್ಲಿ ಸೋತಿದ್ದ ಕೆಕೆಆರ್ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿತು. ಇದಕ್ಕೂ ಮೊದಲು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 81 ರನ್‌ಗಳಿಂದ ಅದ್ಭುತ ಗೆಲುವು ದಾಖಲಿಸಿತ್ತು. ಇದೀಗ ಈ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನ ಬಳಿಕ ಕೆಕೆಆರ್ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಗುಜರಾತ್ ವಿರುದ್ಧದ ಈ ಅದ್ಭುತ ಗೆಲುವಿನ ನಂತರ ಕೆಕೆಆರ್ 4 ಅಂಕ ಗಳಿಸಿದೆ. ತಂಡದ ರನ್ರೇಟ್ +1.375 ಆಗಿದೆ.
ಓದಿ: ಕೆಕೆಆರ್ ರಿಂಕು ಸಿಂಗ್ ಐದು ಸಿಕ್ಸ್ನ ಮ್ಯಾಜಿಕ್ ವಿನ್: ಬೃಹತ್ ಗುರಿ ನಿಯಂತ್ರಿಸುವಲ್ಲಿ ಸೋತ ಗುಜರಾತ್