ಹೈದರಾಬಾದ್ (ತೆಲಂಗಾಣ): ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಅವರ ಅರ್ಧಶತಕ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಂಟು ವಿಕೆಟ್ಗಳ ಜಯಭೇರಿ ಬಾರಿಸಿದೆ. ಎಸ್ಆರ್ಹೆಚ್ ನೀಡಿದ್ದ 187 ರನ್ಗಳ ಸವಾಲಿನ ಗುರಿಯನ್ನು ಆರ್‌ಸಿಬಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಾಗಲೇ ಪೂರೈಸಿ ಗೆಲುವಿನ ಕೇಕೆ ಹಾಕಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಹೆನ್ರಿಕ್ ಕ್ಲಾಸೆನ್ ಅವರ ಸಿಡಿಲಬ್ಬರದ ಶತಕದೊಂದಿಗೆ ನಿಗದಿತ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 186 ರನ್ಗಳನ್ನು ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ನಾಯಕ ಡುಪ್ಲೆಸಿಸ್ ಭರ್ಜರಿ ಆರಂಭ ಒದಗಿಸಿದರು.
ಆರ್‌ಸಿಬಿ ಪರ 17.5 ಓವರ್ಗಳಲ್ಲಿ ವಿರಾಟ್ ಮತ್ತು ಡುಪ್ಲೆಸಿಸ್ ಮೊದಲ ವಿಕೆಟ್ಗೆ ದಾಖಲೆಯ 172 ರನ್ಗಳ ಜೊತೆಯಾಟ ನೀಡಿದರು. ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 63 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ 100 ರನ್ ಸಿಡಿಸಿದರು. ಈ ಮೂಲಕ 2018ರ ಬಳಿಕ ಕಿಂಗ್ ಕೊಹ್ಲಿ ಮೊದಲ ಶತಕ ದಾಖಲಿಸಿದರು. ಮತ್ತೊಂದೆಡೆ, ಅದ್ಬುತ ಸಾಥ್ ನೀಡಿದ ಡುಪ್ಲೆಸಿಸ್ 47 ಬಾಲ್ಗಳನ್ನು ಎದುರಿಸಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ 71 ರನ್ ಕಲೆ ಹಾಕಿದರು. ಈ ವೇಳೆ ಆರ್‌ಸಿಬಿ 18.2 ಓವರ್ಗಳಲ್ಲಿ 177 ರನ್ ಪೇರಿಸಿ ಗೆಲುವಿನ ಅಂಚಿಗೆ ತಲುಪಿತ್ತು.
ನಂತರದಲ್ಲಿ ತಂಡದ ಗೆಲವಿಗೆ ಗ್ಲೇನ್ ಮ್ಯಾಕ್ಸ್ವೆಲ್ ಅಜೇಯ 5 ರನ್ ಮತ್ತು ಬ್ರೇಸ್‌ವೆಲ್ ಅಜೇಯ 4 ರನ್ ಬಾರಿಸಿ ಕಾಣಿಕೆ ನೀಡಿದರು. ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ತಾನು ಆಡಿದ 13 ಪಂದ್ಯಗಳ ಪೈಕಿ ಏಳು ಪಂದ್ಯ ಗೆದ್ದು, ಆರು ಪಂದ್ಯ ಸೋತಿಸಿದೆ. ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ ಆರ್‌ಸಿಬಿ ಸಲೀಸಾಗಿ ಪ್ಲೇ ಆಫ್‌ಗೆ ಏರಲಿದೆ.
ಹೈದರಾಬಾದ್ ಇನ್ಸಿಂಗ್: ಇದಕ್ಕೂ ಮುನ್ನ ಹೈದರಾಬಾದ್ ಪರ ಆರಂಭಿಕರಾಗಿ ಬಂದ ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ತಂಡಕ್ಕೆ ಉತ್ತಮ ಆರಂಭ ಕೊಡುವ ಸೂಚನೆ ಕೊಟ್ಟರು. ಆದರೆ, ಆರ್‌ಸಿಬಿ ಪರ ಮೈಕೆಲ್ ಬ್ರೇಸ್ವೆಲ್ ಉತ್ತಮ ಬೌಲಿಂಗ್ ಪ್ರದರ್ಶನ ತೋರಿ ತನ್ನ ಮೊದಲನೇ ಓವರ್ನಲ್ಲಿ ಇಬ್ಬರ ವಿಕೆಟ್ ಪಡೆದರು. ನಂತರ ಕ್ರೀಸ್ಗೆ ಬಂದ ನಾಯಕ ಐಡೆನ್ ಮಾರ್ಕ್ರಾಮ್ ಮತ್ತು ಹೆನ್ರಿಕ್ ಕ್ಲಾಸೆನ್ ತಂಡದ ರನ್ ಹೆಚ್ಚಿಸಲು ತಾಳ್ಮೆಯ ಆಟವಾಡಿದರು. ಈ ಜೋಡಿ 50 ರನ್ ಜೊತೆಯಾಟ ನೀಡಿತು.
18 ರನ್ ಗಳಿಸಿ ಐಡೆನ್ ಮಾರ್ಕ್ರಾಮ್ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಹೊಡಿ ಬಡಿ ಆಟಕ್ಕೆ ಮುಂದಾದ ಹೆನ್ರಿಕ್ ಕ್ಲಾಸೆನ್ 51 ಬಾಲ್ನಲ್ಲಿ ಎಂಟು ಬೌಂಡರಿ ಮತ್ತು ಆರು ಸಿಕ್ಸರ್ ಸಮೇತ 104 ರನ್ ಸಿಡಿಸಿದರು. ಗ್ಲೆನ್ ಫಿಲಿಪ್ಸ್ ಐದು ರನ್ ಮತ್ತು ಹ್ಯಾರಿ ಬ್ರೂಕ್ ಅಜೇಯ 27 ರನ್ ನೆರವಿನಿಂದ ಹೈದರಾಬಾದ್ ತಂಡ ನಿಗದಿತ 20 ಓವರ್ಗೆ ಐದು ವಿಕೆಟ್ ಕಳೆದುಕೊಂಡು 186 ರನ್ ಪೇರಿಸಿತ್ತು.
ಇದನ್ನೂ ಓದಿ : IPL 2023: 'ಪ್ಲೇ ಆಫ್ ರೇಸ್‌ನಲ್ಲಿ ಆರ್‌ಸಿಬಿ ಉಳಿಯಲು ವಿರಾಟ್ ಕೊಹ್ಲಿ ನೆರವು'