ಜೈಪುರ (ರಾಜಸ್ಥಾನ): ಐಪಿಎಲ್‌ನಲ್ಲಿ ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್ ಮತ್ತು ಆಡಮ್ ಝಂಪಾ ಅವರ ಉತ್ತಮ ಗುಣಮಟ್ಟದ ಸ್ಪಿನ್ ಬೌಲಿಂಗ್ ಅನ್ನು ಬಳಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಶ್ಲಾಘಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಕೊನೆಯ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋತಿರುವ ರಾಜಸ್ಥಾನ್ ರಾಯಲ್ಸ್ ಶುಕ್ರವಾರ ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಅಹಮದಾಬಾದ್‌ನಲ್ಲಿ ನಡೆಯುವ ಐಪಿಎಲ್ 2022ರ ಫೈನಲ್‌ನಲ್ಲಿ ಸೆಣಸಲಿರುವ ಎರಡೂ ತಂಡಗಳು ಐಪಿಎಲ್ 2023ರ ಪ್ಲೇ ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ.
ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಮಾಜಿ ಕೋಚ್ ರವಿಶಾಸ್ತ್ರಿ ಮಾತನಾಡಿ, ಸಂಜು ಸ್ಯಾಮ್ಸನ್ ನಾಯಕನಾಗಿ ಪ್ರಬುದ್ಧರಾಗಿದ್ದಾರೆ. ಅವರು ತಮ್ಮ ಸ್ಪಿನ್ನರ್‌ಗಳನ್ನು ಚೆನ್ನಾಗಿ ಬಳಸುತ್ತಾರೆ. ಒಬ್ಬ ಉತ್ತಮ ನಾಯಕ ಮಾತ್ರ ಮೂವರು ಸ್ಪಿನ್ನರ್‌ಗಳೊಂದಿಗೆ ಆಡಬಹುದು ಮತ್ತು ಅವರನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಬಹುದು ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಸಮತೋಲನವಾಗಿದೆ. ಅವರು ಸಂಘಟಿತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನ 2023 ಗುಜರಾತ್ ನನ್ನ ನೆಚ್ಚಿನ ತಂಡ ಎಂದು ಶಾಸ್ತ್ರಿ ಹೇಳಿಕೊಂಡಿದ್ದಾರೆ. ರಾಜಸ್ಥಾನದಂತೆಯೇ ಗುಜರಾತ್ ಟೈಟಾನ್ಸ್ ಕೂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ರನ್‌ಗಳಿಂದ ಸೋತಿತ್ತು.
ಸದ್ಯದ ಫಾರ್ಮ್ ಮತ್ತು ತಂಡದ ಸ್ಥಿತಿಗತಿ ನೋಡಿದರೆ ಗುಜರಾತ್ ಮತ್ತೊಮ್ಮೆ ಟ್ರೋಫಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಗುಜರಾತ್ ತಂಡ ಈ ವರ್ಷ ಮತ್ತೆ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ. ಟೈಟಾನ್ಸ್ ತಂಡದಲ್ಲಿ ಏಳರಿಂದ - ಎಂಟು ಆಟಗಾಗರು ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಬಲಿಷ್ಠವಾಗಿದೆ ಎಂದಿದ್ದಾರೆ.
ಕೊನೆಯ ಪಂದ್ಯದಲ್ಲಿ ಎರಡು ತಂಡಗಳಿಗೆ ಸೋಲು: ರಾಜಸ್ಥಾನ ರಾಯಲ್ಸ್ ಕಳೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರ ಶತಕದ ನೆರವಿನಿಂದ 213 ರನ್ನ ಗುರಿಯನ್ನು ಮುಂಬೈಗೆ ನೀಡಿತ್ತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ಕ್ಯಾಮರಾನ್ ಗ್ರೀನ್ (44), ಸೂರ್ಯ ಕುಮಾರ್ ಯಾದವ್ (55) ಮತ್ತು ಟಿಮ್ ಡೇವಿಡ್ (45) ರನ್ ಸಹಾಯದಿಂದ ಕೊನೆಯ ಮೂರು ಬಾಲ್ ಉಳಿಸಿಕೊಂಡು ಗೆದ್ದಿದ್ದರು. ಈ ಗೆಲುವು ಮುಂಬೈ ಇಂಡಿಯನ್ಸ್ಗೆ ಅಂಕಪಟ್ಟಿ ಸುಧಾರಿಸಲು ಸಹಕಾರ ಮಾಡಿತ್ತು.
ಇನ್ನು, ಗುಜರಾತ್ ಟೈಟಾನ್ಸ್ ಲೋ ಸ್ಕೋರ್ ಪಂದ್ಯವನ್ನು ಗೆಲ್ಲುವಲ್ಲಿ ಎಡವಿತ್ತು. ಈ ಆವೃತ್ತಿಯ ವೀಕ್ ಟೀಮ್ನಂತೆ ಕಂಡು ಬರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟ್ ಮಾಡಿ ಜಿಟಿಗೆ 130 ರನ್ ಸುಲಭ ಗುರಿಯನ್ನು ನೀಡಿತ್ತು. ಆದರೆ, ಇದನ್ನು ಬೆನ್ನು ಹತ್ತಿದ ಗುಜರಾತ್ ಬ್ಯಾಟಿಂಗ್ ವೈಫಲ್ಯ ಕಂಡಿತು. ನಾಯಕ ಹಾರ್ದಿಕ್ ಪಾಂಡ್ಯ ಅಜೇಯರಾಗಿ 59 ರನ್ ಗಳಿಸಿದರೂ ಪಂದ್ಯ ಗೆಲ್ಲಿಸುವಲ್ಲಿ ಎಡವಿದ್ದರು. ಗುಜರಾತ್ ಡೆಲ್ಲಿಯ ವಿರುದ್ಧ 5 ರನ್ ಸೋಲು ಕಂಡಿತ್ತು.
ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಕೆಎಲ್ ರಾಹುಲ್ ಹೊರಕ್ಕೆ