ಚೆನ್ನೈ (ತಮಿಳುನಾಡು): ತಮಿಳುನಾಡು ಸರ್ಕಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಿಷೇಧಿಸಬೇಕು ಎಂದು ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ಶಾಸಕ ಎಸ್.ಪಿ.ವೆಂಕಟೇಶ್ವರನ್ ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿಂದು ಮಾತನಾಡಿದ ಅವರು, "ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ರಾಜ್ಯದ ಯಾವುದೇ ಆಟಗಾರರನ್ನು ಹೊಂದಿಲ್ಲ. ಆದರೆ ತಮಿಳುನಾಡಿನ ಬ್ರ್ಯಾಂಡ್ನಂತೆ ಮಾಡಿಕೊಂಡಿದೆ. ಹೀಗಾಗಿ ಸರ್ಕಾರ ತಂಡವನ್ನು ಬ್ಯಾನ್ ಮಾಡಬೇಕು" ಎಂದು ಕೇಳಿಕೊಂಡರು.
ತಮಿಳುನಾಡಿನಲ್ಲಿ ಪ್ರತಿಭಾವಂತ ಆಟಗಾರರಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ರಾಜ್ಯದಿಂದ ಒಬ್ಬ ಆಟಗಾರನನ್ನೂ ಆಯ್ಕೆ ಮಾಡಿಕೊಂಡಿಲ್ಲ. ತಮಿಳುನಾಡು ತಂಡ ಎಂಬಂತೆ ಜಾಹೀರಾತು ನೀಡಿ ನಮ್ಮ ಜನರಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು. ಇದೇ ಸಮಯದಲ್ಲಿ ಎಐಎಡಿಎಂಕೆ ಶಾಸಕ ಮತ್ತು ಮಾಜಿ ಸಚಿವ ಎಸ್.ಪಿ.ವೇಲುಮಣಿ ಅವರು ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಎಲ್ಲಾ ಶಾಸಕರಿಗೆ ಉಚಿತ ಪಾಸ್ ನೀಡಬೇಕೆಂದು ಸದನದಲ್ಲಿ ಬೇಡಿಕೆಯಿಟ್ಟರು.
ತಮಿಳುನಾಡು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಚರ್ಚೆಯ ಸಂದರ್ಭದಲ್ಲಿ ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಉಚಿತ ಪಾಸ್‌ಗಳನ್ನು ಕೋರಿದ ಎಐಎಡಿಎಂಕೆ ಶಾಸಕ ಎಸ್.ಪಿ.ವೇಲುಮಣಿ ಅವರಿಗೆ, ಬಿಸಿಸಿಐ ಕಾರ್ಯದರ್ಶಿ ಮತ್ತು ನಿಮ್ಮ ಆಪ್ತ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರನ್ನು ಕೇಳುವಂತೆ ವ್ಯಂಗ್ಯವಾಡಿದರು.
ನಾಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆಪಾಕ್ ಕ್ರೀಡಾಂಗಣದಲ್ಲಿ ತಮ್ಮ ನಾಲ್ಕನೇ ಪಂದ್ಯ ಆಡಲಿದೆ. ಏಪ್ರಿಲ್ 3 ರಂದು ಚೆಪಾಕ್ನಲ್ಲಿ ನಡೆದ ಪಂದ್ಯಲ್ಲಿ ಚೆನ್ನೈ ತಂಡವು ಲಕ್ನೋವನ್ನು ಸೋಲಿಸಿತ್ತು.
ಇದನ್ನೂ ಓದಿ: IPL 2023 MI vs DC: ಮೊದಲ ಗೆಲುವಿಗಾಗಿ ಡೆಲ್ಲಿ vs ಮುಂಬೈ ಕಾಳಗ