ಬೆಂಗಳೂರು: ಐಪಿಎಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ಆರ್‌ಸಿಬಿ ಹೊಸ ಋತುವಿನಲ್ಲಿ ಶುಭಾರಂಭ ಮಾಡಿದೆ. ಗೆಲುವಿನ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿರಾಟ್ ಕೊಹ್ಲಿ, ಮುಂದಿನ ಪಂದ್ಯಗಳಲ್ಲೂ ತಂಡ ಇದೇ ವೇಗವನ್ನು ಕಾಯ್ದುಕೊಳ್ಳಲು ಗಮನಹರಿಸುತ್ತದೆ ಎಂದರು.
ಆರ್‌ಸಿಬಿ ಪರ ಭರ್ಜರಿ ಪ್ರದರ್ಶನ ತೋರಿರುವ ವಿರಾಟ್ (49 ಎಸೆತಗಳಲ್ಲಿ ಅಜೇಯ 82) ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (43 ಎಸೆತಗಳಲ್ಲಿ 73) ಅರ್ಧ ಶತಕಗಳನ್ನು ಸಿಡಿಸುವ ಮೂಲಕ ತಂಡವು 16ನೇ ಆವೃತ್ತಿಯಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ನಿರೀಕ್ಷೆ ಹುಟ್ಟಿಸಿದೆ.
ಪಂದ್ಯದ ನಂತರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, "ಇದು ಅದ್ಭುತ ಗೆಲುವು. ಪಂದ್ಯ ಆರಂಭಕ್ಕೂ ಮುನ್ನ ಅತ್ಯಂತ ವಿಶ್ವಾಸದಿಂದ ಕಣಕ್ಕಿಳಿದೆವು. ಇಂದಿನ ಆಟದ ಬಗ್ಗೆ ನನಗೆ ತುಂಬಾ ಸಂತಸವಿದೆ. ಮುಂಬೈ ಪರ 20ರ ಯುವಕ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ತೋರಿದ್ದು, ತಂಡದ ಸ್ಕೋರ್ ಹೆಚ್ಚಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ" ಎಂದು ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿ, "ಆರ್‌ಸಿಬಿ ತಂಡವು ಮುಂಬೈ ಮತ್ತು ಚೆನ್ನೈ ತಂಡಗಳು ಕಪ್ ಗೆದ್ದಿರುವುದಕ್ಕಿಂತಲೂ ಹೆಚ್ಚು ಬಾರಿ ಕ್ವಾಲಿಫೈರ್ ಹಂತ ತಲುಪಿದೆ. ಹೀಗಾಗಿ ನಮ್ಮ ತಂಡ ಸ್ಥಿರ ಪ್ರದರ್ಶನ ತೋರುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಈ ಬಾರಿ ಅತ್ಯುತ್ತಮ ತಂಡವಾಗಿ ಹೊರಹೊಮ್ಮಲು ಪ್ರಯತ್ನಿಸಿಬೇಕಿದೆ. ಹಾಗೆಯೇ ಇದೇ ವೇಗ ಕಾಯ್ದುಕೊಂಡು ಕಾರ್ಯ ವಿಧಾನ ರೂಪಿಸುತ್ತೇವೆ" ಎಂದು ತಿಳಿಸಿದರು.
"ಇಂದು ಹೊಸ ಚೆಂಡು ಸ್ವಲ್ಪ ಟ್ರಿಕ್ಕಿ ಆಗಿತ್ತು. ಆದರೂ ನಾವು ಮುಂಬೈ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ನಿಭಾಯಿಸದೆವು. ಬೌಲರ್ಗಳ ವಿಕೆಟ್ ದಾಹ ತಣಿಸಲು ಅವಕಾಶ ಮಾಡಿಕೊಡದೇ ಬೌಲರ್ಗಳ ಮೇಲೆ ಒತ್ತಡ ಹಾಕಿದೆವು" ಎಂದರು.
"ತಂಡದ ಪರ ಬೌಲರ್ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಕರಣ್ ಶರ್ಮಾ ಉತ್ತಮ ಬೌಲಿಂಗ್ ಮಾಡಿ ಎಡಗೈ ಆಟಗಾರರನ್ನು ಪೆವಿಲಿಯನ್ಗಟ್ಟಿದರು. ನೆಟ್ಸ್ನಲ್ಲಿ ಅಭ್ಯಾಸ ಮಾಡುವಾಗಲೂ ಕರಣ್ ಸಿಕ್ಸರ್ ಹೊಡೆಯಲು ಆಗದ ಹಾಗೆಯೇ ಬೌಲಿಂಗ್ ಮಾಡುತ್ತಿದ್ದರು" ಎಂದು ವಿರಾಟ್ ಹೇಳಿದರು.
ಕೊಹ್ಲಿ ಮತ್ತು ಡು ಪ್ಲೆಸಿಸ್ 148 ರನ್ಗಳ ಜೊತೆಯಾಟವಾಡಿ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಡುಪ್ಲೆಸಿಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮತ್ತೊಂದೆಡೆ, ಮೊದಲ ಪಂದ್ಯದಲ್ಲೇ ಸೋಲಿನ ಮೂಲಕ ಟೂರ್ನಿ ಆರಂಭಿಸಿರುವ ಮುಂಬೈ ನಾಯಕ ರೋಹಿತ್ ಶರ್ಮಾ ಮಾತನಾಡಿ, "ಈ ಟ್ರ್ಯಾಕ್ನಲ್ಲಿ ತಂಡಕ್ಕೆ ಇನ್ನೂ 30-40 ರನ್ಗಳ ಅವಶ್ಯಕತೆ ಇತ್ತು. ಅಲ್ಲದೇ ಸರಿಯಾದ ಯೋಜನೆಗಳನ್ನು ರೂಪಿಸುವಲ್ಲಿ ಬೌಲರ್ಗಳು ವಿಫಲರಾದರು" ಎಂದು ಹೇಳಿದರು.
"ಪವರ್ ಪ್ಲೇನಲ್ಲಿ ತಂಡ ಉತ್ತಮ ಆರಂಭವನ್ನು ಕಾಣಲಿಲ್ಲ. ಆದರೆ, ತಿಲಕ್ ಮತ್ತು ಇತರೆ ಕೆಲವು ಬ್ಯಾಟರ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಆದರೆ, ನಾವು ಬೌಲಿಂಗ್ ವಿಭಾಗದಲ್ಲಿ ಎಡವಿದೆವು. ಅಲ್ಲದೇ ಇದು ಬ್ಯಾಟಿಂಗ್ಗೆ ಉತ್ತಮ ಪಿಚ್ ಆಗಿತ್ತು" ಎಂದು ರೋಹಿತ್ ಹೇಳಿದರು.
ಇದನ್ನೂ ಓದಿ: ವಿರಾಟ್-ಡುಪ್ಲೆಸಿಸ್ ಮಿಂಚು: ಮುಂಬೈ ವಿರುದ್ಧ 4ನೇ ಅತ್ಯಧಿಕ ಆರಂಭಿಕ ಜೊತೆಯಾಟದ ದಾಖಲೆ