ಕೋಲ್ಕತ್ತಾ: ಹಲವಾರು ವಿಷಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸೌರವ್ ಗಂಗೂಲಿ ಅವರನ್ನು ಕೈಬಿಟ್ಟ ವಿಷಯದಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಅವರನ್ನು ಬಿಸಿಸಿಐ ಕಾರ್ಯದರ್ಶಿಯನ್ನಾಗಿ ಮುಂದುವರಿಸಿರುವುದನ್ನು ಪ್ರಶ್ನಿಸಿರುವ ದೀದಿ, ಸೌರವ್ ಗಂಗೂಲಿಯವರನ್ನು ಬಿಸಿಸಿಐ ಅಧ್ಯಕ್ಷರಾಗಿ ನೇಮಿಸುವಂತೆ ತಾವು ಮನವಿ ಮಾಡಿದ್ದನ್ನು ಉಲ್ಲೇಖಿಸಿದ್ದಾರೆ.
ಗಂಗೂಲಿಯವರ ತಪ್ಪೇನು? ಅಮಿತ್ ಶಾ ಅವರ ಮಗ ಮಂಡಳಿಯಲ್ಲಿ ಇರಬಹುದಾದರೆ, ಸೌರವ್ ಏಕೆ ಇರಬಾರದು ಎಂದು ಸಿಎಂ ಮಮತಾ ಉತ್ತರ ಬಂಗಾಳಕ್ಕೆ ಪ್ರವಾಸಕ್ಕೆ ತೆರಳುವ ಮೊದಲು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಪ್ರಶ್ನಿಸಿದರು. ಗಂಗೂಲಿ ಬಂಗಾಳದ ಹೆಮ್ಮೆ. ನಾನು ಯಾರನ್ನೂ ಟೀಕಿಸುತ್ತಿಲ್ಲ. ಯಾರು ಉತ್ತಮ ಕೆಲಸ ಮಾಡುತ್ತಾರೋ ಅವರಿಗೆ ಮೆಚ್ಚುಗೆ ಸಿಗುತ್ತದೆ. ಕಳಪೆ ಕೆಲಸ ಮಾಡುವವರಿಗೆ ಮೆಚ್ಚುಗೆ ಸಿಗಲ್ಲ ಎಂದು ಹೇಳಿದರು.
ಬೋರ್ಡ್ನಿಂದ ಹೊರಹಾಕಿದ ನಂತರ ಮಾಜಿ ನಾಯಕ ಗಂಗೂಲಿಗೆ ಐಸಿಸಿ ನಾಮನಿರ್ದೇಶನದ ಮೂಲಕ ಮಾತ್ರ ಪರಿಹಾರ ನೀಡಬಹುದು. ಸೌರವ್ ಮೈದಾನದಲ್ಲಿ ಮತ್ತು ಹೊರಗೆ ಎರಡೂ ಕಡೆ ದಕ್ಷತೆಯನ್ನು ತೋರಿಸಿದ್ದಾರೆ. ಅವರು ಸಮರ್ಥ ಆಡಳಿತಗಾರ ಎಂದು ಸಾಬೀತುಪಡಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಮತ್ತು ಗಂಗೂಲಿ ಅವರನ್ನು ಐಸಿಸಿ ಮುಖ್ಯಸ್ಥರನ್ನಾಗಿ ನಾಮನಿರ್ದೇಶನ ಮಾಡಬೇಕು ಎಂದು ಕೇಳಿಕೊಂಡರು. ಸೌರವ್ ಗಂಗೂಲಿ ಎರಡನೇ ಅವಧಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿರುವುದು ಆಘಾತಕಾರಿ. ಸೌರವ್ ಗಂಗೂಲಿ ಐಸಿಸಿ ಮುಖ್ಯಸ್ಥರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ನಾನು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಲಾಲಾರಸದ ಬಳಕೆ ನಿಷೇಧ: ವಿಶ್ವ ಕ್ರಿಕೆಟ್‌ಗೆ ಮಹತ್ವದ ಬದಲಾವಣೆ ತಂದ ಐಸಿಸಿ