ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದ್ದು, ಗೆಲುವು ಸಾಧಿಸುವ ತಂಡ ಫೈನಲ್ಗೆ ಪ್ರವೇಶ ಪಡೆದುಕೊಳ್ಳಲಿದೆ. ಪಂದ್ಯ ಆರಂಭಗೊಳ್ಳುವುದಕ್ಕೂ ಕೆಲ ಗಂಟೆ ಬಾಕಿ ಇರುವಾಗಲೇ ಆರ್ಸಿಬಿ ತಂಡಕ್ಕೆ ಕಹಿ ಸುದ್ದಿವೊಂದು ಎದುರಾಗಿದೆ.
ಲಖನೌ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪಕ್ಕೊಳಗಾಗಿದ್ದಾರೆ. ಹೀಗಾಗಿ, ವಾಗ್ದಂಡನೆಗೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಭಾರತ ತಂಡದಲ್ಲಿ ಆಡುವುದು ನನ್ನ ಗುರಿ, ಅದಕ್ಕಾಗಿ ಸತತ ಪ್ರಯತ್ನ: ದಿನೇಶ್ ಕಾರ್ತಿಕ್
ಎಲಿಮಿನೇಟರ್ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ದಿನೇಶ್ ಕಾರ್ತಿಕ್ ಪಂದ್ಯದ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ. ಆರ್ಟಿಕಲ್ 2.3ರ ಹಂತ 1 ಉಲ್ಲಂಘನೆ ಮಾಡಿದ್ದು, ಈ ಅಪರಾಧಗಳಲ್ಲಿ ಮ್ಯಾಚ್ ರೆಫರಿಯ ತೀರ್ಮಾನವೇ ಅಂತಿಮ ಎಂದು ತಿಳಿಸಿದೆ. ಕಾರ್ತಿಕ್ ಕೂಡ ತಾವು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾರೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ದಿನೇಶ್ ಕಾರ್ತಿಕ್, ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಪಾಟಿದಾರ್ ಜೊತೆ ಉತ್ತಮ ಜೊತೆಯಾಟವಾಡಿದ್ದರು. ಇವರ ಪ್ರದರ್ಶನದಿಂದಾಗಿ ಬಿಸಿಸಿಐ ಆಯ್ಕೆ ಮಂಡಳಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಚಾನ್ಸ್ ನೀಡಿದೆ.