ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಮುಂಬೈ ಇಂಡಿಯನ್ಸ್ ಈ ಸಲದ ಸೀಸನ್ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ್ದು, ತಾನು ಆಡಿರುವ ಎಲ್ಲ ಪಂದ್ಯಗಳಲ್ಲೂ ಸೋಲು ಕಂಡು ಮುಖಭಂಗಕ್ಕೊಳಗಾಗಿದೆ. ಹೀಗಾಗಿ, ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಬದಲಿಗೆ ಬೇರೆ ಆಟಗಾರನಿಗೆ ನಾಯಕತ್ವದ ಜವಾಬ್ದಾರಿ ನೀಡಲು ಫ್ರಾಂಚೈಸಿ ಚಿಂತನೆ ನಡೆಸಿದೆ ಎನ್ನಲಾಗ್ತಿದೆ.
ಕಳಪೆ ಬ್ಯಾಟಿಂಗ್ ಫಾರ್ಮ್ನಿಂದ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮಾ ಅವರ ಪ್ರದರ್ಶನ ತಂಡದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಇದೀಗ ಅವರ ಸ್ಥಾನವನ್ನು ವೇಗಿ ಜಸ್ಪ್ರೀತ್ ಬುಮ್ರಾ ಅಥವಾ ಸೂರ್ಯಕುಮಾರ್ ಯಾದವ್ಗೆ ನೀಡಲು ಚಿಂತನೆ ನಡೆಸಿದೆ ಎಂಬ ಮಾತು ಕೇಳಿ ಬಂದಿದೆ. ಟೀಂ ಇಂಡಿಯಾ ಪರ ಈಗಾಗಲೇ ಕೆಲವೊಂದು ಪಂದ್ಯಗಳಲ್ಲಿ ಉಪನಾಯಕನ ಜವಾಬ್ದಾರಿ ನಿರ್ವಹಿಸಿರುವ ಬುಮ್ರಾ ಹಾಗೂ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ಗೆ ನಾಯಕನ ಜವಾಬ್ದಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದರ ಜೊತೆಗೆ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ಗೂ ಅವಕಾಶ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: 76 ಬೌಂಡರಿ, 37 ಸಿಕ್ಸರ್! 414 ಎಸೆತಗಳಲ್ಲಿ 578 ರನ್ ಚಚ್ಚಿದ 21 ವರ್ಷದ ನೇಹಲ್ ವಡೇರಾ
ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಟೇಕರ್ ಆಗಿರುವ ಬುಮ್ರಾ ಈ ಹಿಂದಿನ ಆವೃತ್ತಿಯಲ್ಲಿ 15 ವಿಕೆಟ್ ಪಡೆದುಕೊಂಡಿದ್ದರು. ಆದರೆ, ಪ್ರಸಕ್ತ ಋತುವಿನಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ. ಆದರೆ, ತಂಡ ಮುನ್ನಡೆಸಿರುವ ಅನುಭವ ಇರುವ ಕಾರಣ ಇವರಿಗೆ ಮಣೆ ಹಾಕಬಹುದು ಎನ್ನಲಾಗಿದೆ. ಇನ್ನೊಂದೆಡೆ ಉತ್ತಮ ಲಯದಲ್ಲಿರುವ ಸೂರ್ಯಕುಮಾರ್ ಯಾದವ್ ಆಡಿರುವ ಆರು ಪಂದ್ಯಗಳಿಂದ 239ರನ್ಗಳಿಕೆ ಮಾಡಿದ್ದಾರೆ. ಈಗಾಗಲೇ ಪ್ಲೇಆಫ್ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಕೈಹಾಕಿದ್ರೆ, ಆಶ್ಚರ್ಯಪಡಬೇಕಿಲ್ಲ.