ಮುಂಬೈ (ಮಹಾರಾಷ್ಟ್ರ): 23 ವರ್ಷದ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಅವರು ತಮ್ಮ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(ಐಪಿಎಲ್) ಇಂದು ಪಾದಾರ್ಪಣೆ ಮಾಡಿದ್ದಾರೆ. ಸೂರ್ಯ ಕುಮಾರ್ ಯಾದವ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿದ ಮುಂಬೈ ತಂಡದಲ್ಲಿ ಅರ್ಜುನ್ಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಲಾಯಿತು.
ಮುಂಬೈ ಇಂಡಿಯನ್ಸ್ ಮಾರ್ಗದರ್ಶಕರೂ ಆಗಿರುವ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಅರ್ಜುನ್ ತೆಂಡೂಲ್ಕರ್‌ಗೆ ರೋಹಿತ್ ಶರ್ಮಾ ಕ್ಯಾಪ್ ನೀಡಿದರು. ಇಂದಿನ ತಂಡದಲ್ಲಿ ಅರ್ಷದ್ ಖಾನ್ ಬದಲಿಗೆ ಅರ್ಜುನ್ ಅವಕಾಶ ಪಡೆದಿದ್ದಾರೆ. ಅರ್ಜುನ್ ಅವರನ್ನು ಐಪಿಎಲ್ 2022ರ ಹರಾಜಿನಲ್ಲಿ ಮೂಲ ಬೆಲೆ 30 ಲಕ್ಷ ರೂಗೆ ಖರೀದಿಸಲಾಗಿತ್ತು. ಈ ಆವೃತ್ತಿಗೂ ಅವರನ್ನು ಮುಂದುವರೆಸಲಾಯಿತು.
ತೆಂಡೂಲ್ಕರ್ ಹೆಸರಿನಲ್ಲಿ ಮತ್ತೊಂದು ದಾಖಲೆ: ಸಚಿನ್, ಅರ್ಜುನ್ ಮೂಲಕ ತಂದೆ, ಮಗ ಒಂದೇ ತಂಡದಲ್ಲಿ ಆಡಿದ ದಾಖಲೆ ಮುಂಬೈ ಇಂಡಿಯನ್ಸ್ನಲ್ಲಿ ಮೂಡಿಬಂದಿದೆ. ಇದಕ್ಕೂ ಮೊದಲು ಐಪಿಎಲ್ನ ಒಂದೇ ತಂಡದಲ್ಲಿ ತಂದೆ ಮತ್ತು ಮಗ ಕಾಣಿಸಿಕೊಂಡ ಉದಾಹರಣೆ ಇಲ್ಲ.
ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್ ಜರ್ಸಿಯಲ್ಲಿ ಮೈದಾನಕ್ಕಿಳಿದ ಮುಂಬೈ ಇಂಡಿಯನ್ಸ್
ಇಂದಿನ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ 2 ಓವರ್ ಎಸೆದಿದ್ದು, 17 ರನ್ ಬಿಟ್ಟು ಕೊಟ್ಟರು. ಒಂದು ವೈಡ್ ಎಸೆದಿದ್ದು, 8.50 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಪಾದಾರ್ಪಣೆ ಪಂದ್ಯದಲ್ಲಿ ವಿಕೆಟ್ ಪಡೆಯಲಿಲ್ಲ.
2022 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಗೋವಾ ತಂಡಕ್ಕೆ ಅರ್ಜುನ್ ಸೇರಿಕೊಂಡರು. ಇದರಲ್ಲಿ 5.69ರ ಎಕಾನಮಿಯಲ್ಲಿ ಏಳು ಪಂದ್ಯಗಳಲ್ಲಿ 10 ವಿಕೆಟ್ಗಳನ್ನು ಪಡೆದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಎಂಟು ಪಂದ್ಯಗಳಲ್ಲಿ 4.98ರ ಎಕಾನಮಿಯಲ್ಲಿ ಏಳು ವಿಕೆಟ್ಗಳನ್ನು ಪಡೆದಿದ್ದಾರೆ. ಒಂಬತ್ತು ಟಿ20ಗಳಲ್ಲಿ ಅರ್ಜುನ್ ಐದು ಇನ್ನಿಂಗ್ಸ್‌ಗಳಲ್ಲಿ 15 ಅತ್ಯುತ್ತಮ ಸ್ಕೋರ್‌ನೊಂದಿಗೆ 20 ರನ್ ಗಳಿಸಿದ್ದಾರೆ.
ಏಳು ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅರ್ಜುನ್ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 24.77 ಸರಾಸರಿಯಲ್ಲಿ ಶತಕದೊಂದಿಗೆ 223 ರನ್ ಸಂಪಾದಿಸಿದ್ದಾರೆ. 3.42 ರ ಎಕಾನಮಿ ದರದಲ್ಲಿ 12 ವಿಕೆಟ್ ಕಬಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಸ್ಥಾನ ವಿರುದ್ಧದ ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ್ದರು.
ಐಪಿಎಲ್‌ನಲ್ಲಿ ಆಡಿದ ಸಹೋದರರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಶಾನ್ ಮಾರ್ಷ್, ಮಿಚೆಲ್ ಮಾರ್ಷ್, ಮೈಕೆಲ್ ಹಸ್ಸಿ, ಡೇವಿಡ್ ಹಸ್ಸಿ, ಆಲ್ಬಿ ಮೊರ್ಕೆಲ್, ಮೋರ್ನೆ ಮೊರ್ಕೆಲ್, ಬ್ರೆಂಡನ್ ಮೆಕಲಮ್, ನಾಥನ್ ಮೆಕಲಮ್, ಡ್ವೇನ್ ಬ್ರಾವೋ, ಡ್ಯಾರೆನ್ ಬ್ರಾವೋ, ಸಿದ್ದಾರ್ಥ್ ಕೌಲ್, ಉದಯ್ ಕೌಲ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಸ್ಯಾಮ್ ಕರ್ರಾನ್, ಟಾಮ್ ಕುರಾನ್ ಮತ್ತು ಮಾರ್ಕೊ ಜಾನ್ಸೆನ್, ಡುವಾನ್ ಜಾನ್ಸೆನ್ (ಅವಳಿ ಸಹೋದರರು) ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಲ್‌ನಲ್ಲಿ ವೆಂಕಟೇಶ್ ಅಯ್ಯರ್ ಚೊಚ್ಚಲ ಶತಕ; ಮುಂಬೈಗೆ 186 ರನ್ ಗುರಿ