ಮುಂಬೈ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 2ನೇ ವಾರದಲ್ಲಿ 12 ಮತ್ತು13ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಐಪಿಎಲ್ ಮೂಲಗಳಿಂದ ತಿಳಿದು ಬಂದಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಉಳಿದಿದೆ.
ಬಿಸಿಸಿಐ ಈ ಕುರಿತು ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಆದರೆ, ಐಪಿಎಲ್ ಅಧಿಕಾರಿಗಳು ಹರಾಜು ಪ್ರಕ್ರಿಯೆ ಫೆಬ್ರವರಿಯ 2ನೇ ವಾರದಲ್ಲಿ ನಡೆಯುತ್ತದೆ ಎಂದು ಖಚಿತಪಡಿಸಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯ ಮತ್ತು ಐಪಿಎಲ್ ಮೆಗಾ ಹರಾಜಿನ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ. ಫೆಬ್ರವರಿ 12 ರಂದು ಕೋಲ್ಕತ್ತಾದ ಈಡೆನ್ ಗಾರ್ಡನ್ನಲ್ಲಿ ಏಕದಿನ ಸರಣಿಯ 2ನೇ ಪಂದ್ಯ ನಡೆಯಲಿದೆ. ಆದರೆ ಬಿಸಿಸಿಐ ಅಧಿಕಾರಿಗಳು ಯಾವುದೇ ಅಡಚಣೆಯಿಲ್ಲದೆ ಮೆಗಾ ಹರಾಜು ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ ರಿಟೆನ್ಷನ್ : ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು, ಪಡೆದ ಹಣದ ಸಂಪೂರ್ಣ ವಿವರ ಇಲ್ಲಿದೆ
ಈಗಾಗಲೇ ಬಿಸಿಸಿಐ ವಿವಿಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿರುವ ಆಟಗಾರರ ಹೆಸರನ್ನು ಜನವರಿ 17ರೊಳಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದೆ. ಈ ಮೆಗಾ ಇವೆಂಟ್ನಲ್ಲಿ 10 ತಂಡಗಳು ಭಾಗವಹಿಸುವುದರಿಂದ ಸುಮಾರು 1000 ಆಟಗಾರರ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ 200ರಿಂದ 250 ಆಟಗಾರರನ್ನು ಫ್ರಾಂಚೈಸಿಗಳು ಹರಾಜಿನಲ್ಲಿ ಖರೀದಿಸಲಿವೆ.
ಈಗಾಗಲೇ ಐಪಿಎಲ್ನ 8 ತಂಡಗಳು ತಮಗೆ ಬೇಕಾದ ರಿಟೈನ್ ಮಾಡಿಕೊಂಡಿವೆ. ಚೆನ್ನೈ, ಕೋಲ್ಕತ್ತಾ, ಮುಂಬೈ ಮತ್ತು ಡೆಲ್ಲಿ ತಂಡಗಳು ತಲಾ 4 ಆಟಗಾರರನ್ನು, ಬೆಂಗಳೂರು, ರಾಜಸ್ಥಾನ್ ಮತ್ತು ಹೈದರಾಬಾದ್ ಫ್ರಾಂಚೈಸಿ ತಲಾ 3 ಆಟಗಾರರನ್ನು ಹಾಗೂ ಪಂಜಾಬ್ ಕಿಂಗ್ಸ್ ಇಬ್ಬರನ್ನು ಮಾತ್ರ ರಿಟೈನ್ ಮಾಡಿಕೊಂಡಿದೆ. ಹೊಸ ತಂಡಗಳು ಡಿಸೆಂಬರ್ ಅಂತ್ಯದ ವೇಳೆಗೆ ತಮ್ಮ 3 ರಿಟೈನ್ ಆಟಗಾರರ ಹೆಸರನ್ನು ಘೋಷಿಸಬೇಕಿದೆ.
ಇದನ್ನೂ ಓದಿ:ರಿಟೈನ್ನಲ್ಲಿ ಕೋಟ್ಯಧಿಪತಿಗಳಾದ ಟಾಪ್ 5 ಕ್ರಿಕೆಟಿಗರು ಇವರೇ ನೋಡಿ
ಫ್ರಾಂಚೈಸಿಗಳ ಉಳಿದಿರುವ ಹಣ
ಹೊಸ ಎರಡು ತಂಡಗಳನ್ನು ಬಿಟ್ಟು ಹಳೆಯ 8 ತಂಡಗಳ ಪೈಕಿ ಡೆಲ್ಲಿ ಕಾಪಿಟಲ್ಸ್ ಬಳಿ 47.5 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ ಬಳಿ 48 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ ಬಳಿ 48 ಕೋಟಿ, ಮುಂಬೈ ಇಂಡಿಯನ್ಸ್ ಬಳಿ 48 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ 57 ಕೋಟಿ, ರಾಜಸ್ಥಾನ್ ರಾಯಲ್ಸ್ ಬಳಿ 62 ಕೋಟಿ, ಸನ್ ರೈಸರ್ಸ್ ಹೈದರಾಬಾದ್ ಬಳಿ 68 ಕೋಟಿ ಹಾಗೂ ಪಂಜಾಬ್ ಕಿಂಗ್ಸ್ ಬಳಿ 72 ಕೋಟಿ ರೂಪಾಯಿ ಇದೆ. ಉಳಿದಿರುವ ಈ ಹಣದಲ್ಲಿ ಮುಂಬರುವ ಮೆಗಾ ಹರಾಜಿನಲ್ಲಿ ಇತರ ಆಟಗಾರರನ್ನು ಖರೀದಿಸಬೇಕಾಗಿದೆ.
ಇನ್ನು ಹೊಸದಾಗಿ ಸೇರ್ಪಡೆಗೊಂಡ ಲಖನೌ ಮತ್ತು ಅಹಮದಾಬಾದ್ ತಂಡಗಳು ತಲಾ 90 ಕೋಟಿ ರೂಪಾಯಿಯನ್ನು ಹೊಂದಿದ್ದು, ಹರಾಜಿಗೂ ಮೊದಲೇ 3 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದಾಗಿದೆ ಅಥವಾ ನೇರವಾಗಿ ಹರಾಜಿನಲ್ಲೇ ಖರೀದಿಸುವ ಅವಕಾಶ ಕೂಡ ಇದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ 3 ದಶಕಗಳಿಂದ ಗೆಲ್ಲಲಾಗದಿರುವ ಟೆಸ್ಟ್ ಸರಣಿ.. ಈ ಬಾರಿ ಕೊಹ್ಲಿ ಬಳದಿಂದ ಛಿದ್ರ: ರವಿಶಾಸ್ತ್ರಿ ಭವಿಷ್ಯ