ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವನಾಗಿ 15ನೇ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ದಿನೇಶ್ ಕಾರ್ತಿಕ್, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಟಿ20 ವಿಶ್ವಕಪ್ ಆಡುವುದು ನನ್ನ ಬಹುದೊಡ್ಡ ಗುರಿ ಎಂದು ಹೇಳಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ಶನಿವಾರ ಡೆಲ್ಲಿ ವಿರುದ್ಧ ನಡೆ ಪಂದ್ಯದಲ್ಲಿ 34 ಎಸೆತಗಳಲ್ಲಿ 66 ರನ್ಗಳಿಸುವ ಮೂಲಕ ಆರ್ಸಿಬಿಗೆ 16 ರನ್ಗಳ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಪಂದ್ಯ ಮಾತ್ರವಲ್ಲ, ಪ್ರಸ್ತುತ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕ್ರಮವಾಗಿ 32*(14),14*(7), 44*(23), 7*(2), 34(14) ರನ್ಗಳಿಸಿದ್ದಾರೆ. ಕೇವಲ ಒಂದು ಪಂದ್ಯದಲ್ಲಿ ಮಾತ್ರ ವಿಕೆಟ್ ಒಪ್ಪಿಸಿರುವ ಅವರು ತಂಡದ ಮಧ್ಯಮ ಕ್ರಮಾಂಕದ ಬಲ ಮತ್ತು ಫಿನಿಶರ್ ಆಗಿ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡೆಲ್ಲಿ ವಿರುದ್ಧದ ಪಂದ್ಯದ ನಂತರ ಮಾತನಾಡಿದ 36 ವರ್ಷದ ಕಾರ್ತಿಕ್, ನಾನು ದೊಡ್ಡ ಕನಸನ್ನು ಹೊಂದಿದ್ದೇನೆ. ಅದನ್ನು ಸಾಧಿಸುವ ಸಲುವಾಗಿ ಕಠಿಣ ಪರಿಶ್ರಮ ವಹಿಸುತ್ತಿದ್ದೇನೆ. ದೇಶಕ್ಕಾಗಿ ಏನಾದರೂ ವಿಶೇಷ ಸಾಧನೆ ಮಾಡಬೇಕು ಎಂಬುದು ನನ್ನ ಬಹುದೊಡ್ಡ ಗುರಿ. ಇದು ನನ್ನ ಪಯಣದ ಒಂದು ಭಾಗವಷ್ಟೆ. ಭಾರತ ತಂಡದ ಭಾಗವಾಗುವುದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದ್ದೇನೆ." ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ನಂತರ ಹೇಳಿಕೊಂಡರು.
ಭಾನುವಾರ ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ 92ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ಕಾರ್ತಿಕ್, 34 ಎಸೆತಗಳಲ್ಲಿ ತಲಾ 5 ಬೌಂಡರಿ ಮತ್ತು ಸಿಕ್ಸರ್ಗಳ ಸಹಿತ ಅಜೇಯ 66 ರನ್ ಸಿಡಿಸಿ ತಂಡದ ಮೊತ್ತವನ್ನು 189ಕ್ಕೆ ಕೊಂಡೊಯ್ದರು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ 173 ರನ್ಗಳಿಸಿ 16ರನ್ಗಳಿಂದ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ:'ಕೊಹ್ಲಿ ಉತ್ತಮ ಕ್ರಿಕೆಟಿಗ, ಆದ್ರೆ ನನ್ನೆದುರು ಆಡಿದ್ದಿದ್ದರೆ ಇಷ್ಟು ರನ್-ಶತಕ ಸಿಡಿಸುತ್ತಿರಲಿಲ್ಲ'