ಮುಂಬೈ: ಆ್ಯಂಡ್ರೆ ರಸೆಲ್ ಆಲ್ರೌಂಡರ್ ಆಟದ ಹೊರತಾಗಿಯೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 8 ರನ್ಗಳ ಸೋಲು ಅನುಭವಿಸಿತು. ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. 15ನೇ ಆವೃತ್ತಿಯಲ್ಲಿ ಹಿಂದಿನ 34 ಪಂದ್ಯಗಳಲ್ಲಿ ಟಾಸ್ ಗೆದ್ದ ಯಾವುದೇ ತಂಡ ಬ್ಯಾಟಿಂಗ್ ಮಾಡಲು ಮುಂದಾಗಿಲ್ಲ. ಆದರೆ ಹಾರ್ದಿಕ್ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, 157 ರನ್ಗಳ ಸಾಧಾರಣ ಗುರಿ ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ಟೈಟನ್ಸ್ ನೀಡಿದ್ದ 157 ರನ್ ಬೆನ್ನಟ್ಟಿದ ಕೆಕೆಆರ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 34 ರನ್ಗಳಾಗುವಷ್ಟರಲ್ಲಿ ಸ್ಯಾಮ್ ಬಿಲ್ಲಿಂಗ್ಸ್(4), ಸುನಿಲ್ ನರೈನ್(5), ನಿತೀಶ್ ರಾಣಾ(2) ಮತ್ತು ಶ್ರೇಯಸ್ ಅಯ್ಯರ್(2) ವಿಕೆಟ್ ಕಳೆದುಕೊಂಡಿತು.
ಆದರೆ ಇಂದೇ ಆವೃತ್ತಿಯಲ್ಲಿ ಮೊದಲ ಅವಕಾಶ ಪಡೆದಿದ್ದ ರಿಂಕು (ಸಿಂಗ್ 35), ವೆಂಕಟೇಶ್ ಅಯ್ಯರ್ ಜೊತೆಗೂಡಿ 45 ರನ್ಗಳ ಜೊತೆಯಾಟ ನೀಡಿದರು. ಈ ಜೋಡಿ ಬೇರ್ಪಡುತ್ತಿದ್ದಂತೆ ಕೆಕೆಆರ್ ಹೊಸ ಬ್ಯಾಟರ್ಗಳು ಗುಜರಾತ್ ಬೌಲಿಂಗ್ ದಾಳಿಗೆ ಉತ್ತರಿಸುವಲ್ಲಿ ವಿಫಲರಾದರು. ಶಿವಂ ಮಾವಿ 2 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಅಬ್ಬರಿಸಿದ ರಸೆಲ್ 25 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಸಿಕ್ಸರ್ಗಳ ಸಹಿತ 48 ರನ್ಗಳಿಸಿ ಕೊನೆಯ ಓವರ್ನಲ್ಲಿ ಗೆಲ್ಲಲು 5 ಎಸೆತಗಳಲ್ಲಿ 12 ರನ್ ಬೇಕಿದ್ದ ವೇಳೆ ಔಟಾದರು. ಉಮೇಶ್ ಯಾದವ್ ಅಜೇಯ 15 ರನ್ಗಳಿಸಿದರೆ ಔಟಾಗದೇ ಉಳಿದರು.
ಮೊಹಮ್ಮದ್ ಶಮಿ 20ಕ್ಕೆ 2, ಯಶ್ 42ಕ್ಕೆ 2, ರಶೀದ್ ಖಾನ್ 22ಕ್ಕೆ 2, ಅಲ್ಜಾರಿ ಜೋಶೆಪ್ 31ಕ್ಕೆ 1 ಮತ್ತು ಫರ್ಗುಸನ್ 33ಕ್ಕೆ 1 ವಿಕೆಟ್ ಪಡೆದು ಸಾಧಾರಣ ಮೊತ್ತವನ್ನು ಡಿಫೆಂಡ್ ಮಾಡಿ ಗೆಲ್ಲಲು ನೆರವಾದರು.
ಇದಕ್ಕೂ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೈಟನ್ಸ್ ಆರಂಭದಲ್ಲೇ 7 ರನ್ಗಳಿಸಿದ್ದ ಶುಬ್ಮನ್ ಗಿಲ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ 2ನೇ ವಿಕೆಟ್ಗೆ ಒಂದಾದ ಹಾರ್ದಿಕ್ ಮತ್ತು ವೃದ್ಧಿಮಾನ್ ಸಹಾ 75 ರನ್ಗಳ ಜೊತೆಯಾಟ ನಡೆಸಿ ಆಘಾತದಿಂದ ಪಾರು ಮಾಡಿದರು. ಆದರೆ ಟಿ20 ಕ್ರಿಕೆಟ್ಗೆ ತಕ್ಕಂತೆ ಬ್ಯಾಟ್ ಮಾಡದ ಸಹಾ 25 ಎಸೆತಗಳಲ್ಲಿ 25 ರನ್ ಸಿಡಿಸಿ ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸಿದರು.
3ನೇ ವಿಕೆಟ್ ಡೇವಿಡ್ ಮಿಲ್ಲರ್ ಮತ್ತು ಪಾಂಡ್ಯ 23 ಎಸೆತಗಳಲ್ಲಿ 50 ರನ್ ಸೇರಿಸಿ ಬೃಹತ್ ಮೊತ್ತದ ಭರವಸೆ ಮೂಡಿಸಿದ್ದರು. ಆದರೆ 20 ಎಸೆತಗಳಲ್ಲಿ 27 ರನ್ಗಳಿಸಿದ್ದ ಮಿಲ್ಲರ್ ಶಿವಂ ಮಾವಿಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ಗುಜರಾತ್ ಪತನ ಆರಂಭವಾಯಿತು. ನಂತರದ ಓವರ್ ಅಂತರದಲ್ಲಿ 67 ರನ್ಗಳಿಸಿದ್ದ ಪಾಂಡ್ಯ ಮತ್ತು ಕಳೆದ ಪಂದ್ಯದ ಹೀರೋ ರಸೆಲ್ ಒಂದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಈ ಪಂದ್ಯವನ್ನು ಗೆಲ್ಲುವ ಮೂಲಕ ಗುಜರಾತ್ ಟೈಟನ್ಸ್ 12 ಅಂಕ ಪಡೆದು ಅಗ್ರಸ್ಥಾನಕ್ಕೇರಿತು. ಪಾಂಡ್ಯ ನೇತೃತ್ವದ ಟೈಟನ್ಸ್ ಮುಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಏಪ್ರಿಲ್ 27ರಂದು ಆಡಲಿದೆ.
ಇದನ್ನೂ ಓದಿ: 7 ಪಂದ್ಯಗಳಿಗೆ 491ರನ್! ಕೊಹ್ಲಿಯ 2016ರ ದಾಖಲೆಯತ್ತ ಬಟ್ಲರ್ ಓಟ