ಹೈದರಾಬಾದ್: 14ನೇ ಆವೃತ್ತಿ ದ್ವಿತೀಯಾರ್ಧದ ಇಂಡಿಯನ್ ಪ್ರೀಮಿಯರ್ ಲೀಗ್(IPL) ಪಂದ್ಯಗಳು ಬರುವ ಭಾನುವಾರದಿಂದ ಆರಂಭಗೊಳ್ಳಲಿವೆ. ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಈಗಾಗಲೇ ಅರಬ್ ನಾಡು ಯುಎಇನಲ್ಲಿ ಬೀಡುಬಿಟ್ಟಿವೆ. ಪಂದ್ಯಾವಳಿ ಆರಂಭಗೊಳ್ಳಲು ಕೆಲವೇ ದಿನಗಳು ಮಾತ್ರ ಬಾಕಿ ಇರುವಾಗಲೇ ಕ್ರಿಕೆಟ್ ಪ್ರೇಮಿಗಳಿಗೆ ಶುಭಸುದ್ದಿ ಸಿಕ್ಕಿದೆ.
ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಐಪಿಎಲ್‌ನ ಉಳಿದ ಪಂದ್ಯಗಳನ್ನು ವೀಕ್ಷಿಸಲು ಈ ಸಲ ಕ್ರಿಕೆಟ್ ಪ್ರೇಮಿಗಳಿಗೆ ಅವಕಾಶ ಲಭಿಸಿದೆ. ಹೀಗಾಗಿ, ಮೈದಾನಕ್ಕೆ ತೆರಳಿ ತಮ್ಮಿಷ್ಟದ ಪಂದ್ಯಗಳನ್ನು ನೋಡಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಐಪಿಎಲ್ ಆಡಳಿತ ಮಂಡಲಿ ಮಾಹಿತಿ ಹಂಚಿಕೊಂಡಿದ್ದು, ಯುಎಇ ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.
2019ರ ನಂತರ ಸಿಕ್ಕ ಅವಕಾಶ: ಸೀಮಿತ ಸಂಖ್ಯೆಯ ಅಭಿಮಾನಿಗಳಿಗೆ ಟಿಕೆಟ್
ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಕಳೆದೆರಡು ವರ್ಷಗಳಿಂದ ಎಲ್ಲ ಕ್ರಿಕೆಟ್ ಪಂದ್ಯಗಳು ಕ್ರೀಡಾಭಿಮಾನಿಗಳಿಲ್ಲದೇ ನಡೆಯುತ್ತಿವೆ. ಆದರೆ ಇದೇ ಮೊದಲ ಸಲ ಪಂದ್ಯಗಳ ವೀಕ್ಷಣೆಗೆ ಅಭಿಮಾನಿಗಳಿಗೆ ಅವಕಾಶ ಸಿಕ್ಕಿದೆ. ಸೆಪ್ಟೆಂಬರ್ 16ರಿಂದ ಕ್ರಿಕೆಟ್ ಪಂದ್ಯಗಳ ಟಿಕೆಟ್ ನೀಡುವ ಕಾರ್ಯ ಆರಂಭಗೊಳ್ಳಲಿದ್ದು, www.iplt20.com ಅಥವಾ PlatinumList.net ಮೂಲಕ ಆನ್ಲೈನ್ ಟಿಕೆಟ್ ಖರೀದಿಸಬಹುದು. ಪಂದ್ಯಗಳ ವೀಕ್ಷಣೆ ಮಾಡಲು ಸೀಮಿತ ಸಂಖ್ಯೆಯ ಅಭಿಮಾನಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಗುಟ್ಕಾ ತಿಂದು ಆಸ್ಪತ್ರೆ ಮುಂಭಾಗದ ಉಗುಳಿದ ವ್ಯಕ್ತಿ: ಆತನ ಕೈಯಿಂದಲೇ ಸ್ವಚ್ಛಗೊಳಿಸಿದ ಜಿಲ್ಲಾಧಿಕಾರಿ
ಸೆಪ್ಟೆಂಬರ್ 20: ಆರ್‌ಸಿಬಿ vs ಕೊಲ್ಕತ್ತಾ
ಸೆಪ್ಟೆಂಬರ್ 19ರಂದು ಮುಂಬೈ ಇಂಡಿಯನ್ಸ್- ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಖಾಮುಖಿಯಾಗಲಿವೆ. ಮರುದಿನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಯಲಿದೆ. ದ್ವಿತೀಯಾರ್ಧದ ಪಂದ್ಯಗಳು ದುಬೈ, ಶಾರ್ಜಾ ಹಾಗೂ ಅಬುದಾಬಿಯಲ್ಲಿ ಆಯೋಜನೆಗೊಂಡಿವೆ.
ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾ ವೈರಸ್ನಿಂದಾಗಿ ಮುಂದೂಡಿಕೆಯಾಗಿತ್ತು.