ಕೊಲೊಂಬೊ: ಭಾನುವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ವನಿಂದು ಹಸರಂಗ ಮತ್ತು ವೇಗಿ ದುಷ್ಮಂತ ಚಮೀರಾಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವುದಕ್ಕೆ ನಿರಾಪೇಕ್ಷಣಾ ಪತ್ರ ನೀಡಿದೆ.
ಕೋವಿಡ್ 19 ಕಾರಣ ಮುಂದೂಡಲ್ಪಟ್ಟಿದ್ದ ಐಪಿಎಲ್ ಸೆಪ್ಟೆಂಬರ್ 19ರಂದು ಯುಎಇಯಲ್ಲಿ ನಡೆಯಲಿದೆ. ಕೆಲವು ಆಟಗಾರರು ಐಪಿಎಲ್ನ 2ನೇ ಭಾಗಕ್ಕೆ ಅಲಭ್ಯರಾಗುತ್ತಿರುವುದರಿಂದ ಫ್ರಾಂಚೈಸಿಗಳು ಬದಲಿ ಆಟಗಾರರನ್ನು ಘೋಷಿಸಿದ್ದವು. ಅದರಂತೆ ಆರ್ಸಿಬಿ ಕೂಡ ಜಂಪಾ ಬದಲಿಗೆ ಶ್ರೀಲಂಕಾದ ವನಿಂದು ಹಸರಂಗರನ್ನು ಮತ್ತು ಡೇನಿಯಲ್ ಸ್ಯಾಮ್ಸ್ ಬದಲಿಗೆ ಚಮೀರಾರನ್ನು ಬದಲಿ ಆಟಗಾರರನ್ನಾಗಿ ನೇಮಿಸಿತ್ತು.
ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಇಬ್ಬರೂ ಆಟಗಾರರಿಗೂ ಐಪಿಎಲ್ನಲ್ಲಿ ಆಡಲು ಯಾವುದೇ ಅಭ್ಯಂತರವಿಲ್ಲ ಎಂದು ಘೋಷಿಸಿ ಎನ್ಒಸಿ ನೀಡಿದೆ. ಆದರೆ ಐಪಿಎಲ್ಗೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮುಗಿದ ನಂತರ ಸೆಪ್ಟೆಂಬರ್ 15ರಂದು ಯುಎಇಯಲ್ಲಿರುವ ಐಪಿಎಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಭಾನುವಾರ ಖಚಿತಪಡಿಸಿದೆ.
ಐಪಿಎಲ್ ಮುಗಿಯುತ್ತಿದ್ದಂತೆ ಅಕ್ಟೋಬರ್ 10ರಂದು ಈ ಇಬ್ಬರು ಆಟಗಾರರು ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳ ಅಭ್ಯಾಸ ಪಂದ್ಯದ ವೇಳೆಗೆ ಶ್ರೀಲಂಕಾ ತಂಡಕ್ಕೆ ಮರಳಲಿದ್ದಾರೆ ಎಂದು ಎಸ್ಎಲ್ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಐಪಿಎಲ್ಗೆ ಆತನ ಆಗಮನ ನಿರೀಕ್ಷಿತ, ಆರ್ಸಿಬಿ ಅದ್ಭುತ ಆಯ್ಕೆ ಮಾಡಿದೆ : ಆಕಾಶ್ ಚೋಪ್ರಾ