ಹೈದರಾಬಾದ್: ಆಸ್ಟ್ರೇಲಿಯಾ ಕ್ರಿಕೆಟ್ನ ಮಾಜಿ ಆಲ್‌ರೌಂಡರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಟಿ - 20 ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಐವರು ಬೌಲರ್ಗಳ ಪಟ್ಟಿ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕೂಡ ಶೇನ್ ವಾಟ್ಸನ್ ಪರಿಗಣಿಸಿದ್ದಾರೆ. ಮಾತ್ರವಲ್ಲದೇ, ಜಸ್ಪ್ರೀತ್ ಬುಮ್ರಾ ಬಗ್ಗೆ ಸಾಕಷ್ಟು ಸಕಾರಾತ್ಮಕ ಮಾತುಗಳನ್ನು ಆಡಿದ್ದಾರೆ.
ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿದ ಶೇನ್ ವಾಟ್ಸನ್, ಟಿ - 20 ಕ್ರಿಕೆಟ್ನ ಐವರು ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳು ಯಾರು ಎಂಬುದನ್ನು ವಿವರಿಸಿದ್ದಾರೆ. ಟೀಮ್ ಇಂಡಿಯಾದ ಯುವ ಬೌಲರ್ ಜಸ್ಪ್ರೀತ್ ಬುಮ್ರಾ ಅವರಲ್ಲದೇ ಓರ್ವ ಶ್ರೀಲಂಕಾದ ವೇಗಿ, ಓರ್ವ ಪಾಕಿಸ್ತಾನದ ಆಲ್‌ರೌಂಡರ್ ಸೇರಿದಂತೆ ಇಬ್ಬರು ವೆಸ್ಟ್ ಇಂಡೀಸ್ ತಂಡದ ಬೌಲರ್ಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾಗೆ ಸಿಕ್ಕ ಅದೃಷ್ಟದ ಬೌಲರ್ ಎಂದಿರುವ ಶೇನ್ ವಾಟ್ಸನ್, ಆತನ ಬೌಲಿಂಗ್‌ನಲ್ಲಿನ ವೇಗ ಹಾಗೂ ಶೈಲಿ ಆತನ ಭವಿಷ್ಯವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿದೆ ಎಂದು ಬುಮ್ರಾ ಅವರ ಬಲಿಷ್ಠ ಬೌಲಿಂಗ್ ದಾಳಿ ಬಗ್ಗೆ ವರ್ಣನೆ ಮಾಡಿದ್ದಾರೆ.
"ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ನನ್ನ ಸಾರ್ವಕಾಲಿಕ ಅಗ್ರ ಐವರು ಬೌಲರ್ಗಳ ಪಟ್ಟಿಯಲ್ಲಿ ಮೊದಲನೆಯ ಸ್ಥಾನದಲ್ಲಿದ್ದಾರೆ ಎಂದಿರುವ ವಾಟ್ಸನ್, ಕ್ರಮವಾಗಿ ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಅನುಭವಿ ಆಟಗಾರ ಡ್ವೆಯ್ನ್ ಬ್ರಾವೋ ಹಾಗೂ ಕೊಲ್ಕತಾ ನೈಟ್ರೈಡರ್ಸ್ ಆರಂಭಿಕ ಆಟಗಾರ ಸುನಿಲ್ ನರೈನ್ ನಂತರ ಸ್ಥಾನ ಪಡೆದುಕೊಂಡಿದ್ದಾರೆ" ಎಂದು ಅವರ ಬೌಲಿಂಗ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಸದ್ಯ ಶೇನ್ ವಾಟ್ಸನ್ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಶ್ರೇಷ್ಠ ಪ್ರದರ್ಶನ ತೋರಿದ್ದರಿಂದ ಚೆನ್ನೈ ಒಂದೂ ವಿಕೆಟ್ ಕಳೆದುಕೊಳ್ಳದೇ ಗೆಲ್ಲಲು ಕಾರಣವಾಗಿದ್ದರು.