ದುಬೈ: ಇಂದು ಸಂಜೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ.
ಕೊಹ್ಲಿ ನಾಯಕತ್ವದ ಬೆಂಗಳೂರು ತಂಡ ಆಡಿದ 5 ಪಂದ್ಯಗಳಲ್ಲಿ 3 ಪಂದ್ಯ ಜಯಿಸಿದ್ದು, ಎರಡು ಪಂದ್ಯದಲ್ಲಿ ಸೋಲು ಕಂಡಿದೆ. ಇತ್ತ ಚೆನ್ನೈ ತಂಡ ಆಡಿದ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಜಯಗಳಿಸಿದ್ದು, 4 ಪಂದ್ಯಗಳನ್ನು ಕೈಚೆಲ್ಲಿದೆ.
ಗೆಲುವಿನ ವಿಶ್ವಾಸದಲ್ಲಿ ಕೊಹ್ಲಿ ಪಡೆ:
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಆರ್ಸಿಬಿ ತಂಡ ಇಂದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಟಿ-20 ಸ್ಪೆಷಲಿಸ್ಟ್ಗಳಾದ ಫಿಂಚ್, ಕೊಹ್ಲಿ, ವಿಲಿಯರ್ಸ್ ಆರ್ಸಿಬಿ ತಂಡದ ಶಕ್ತಿಯಾಗಿದ್ದಾರೆ, ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಆರಂಭದಿಂದ ಮಿಂಚುತ್ತಿದ್ದಾರೆ. ಗಾಯದ ಕಾರಣದಿಂದ ಹೊರಗುಳಿದಿದ್ದ ಕ್ರಿಸ್ ಮೋರಿಸ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಬೌಲಿಂಗ್ನಲ್ಲಿ ಯುಜುವೇಂದ್ರ ಚಾಹಲ್ ಬೆಂಗಳೂರು ತಂಡದ ಶಕ್ತಿ. ನವದೀಪ್ ಸೈನಿ, ಇಸುರು ಉದಾನ, ವಾಷಿಂಗ್ಟನ್ ಸುಂದರ್ ಉತ್ತಮ ಪ್ರದರ್ಶನ ತೋರಿದ್ದಾರೆ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಿರಾಜ್ 2 ವಿಕೆಟ್ ಕಬಳಿಸಿದ್ದರು. ಒಂದು ವೇಳೆ ಇಂದಿನ ಪಂದ್ಯದಲ್ಲಿ ಮೋರಿಸ್ ಕಣಕ್ಕಿಳಿದರೆ ಬೆಂಗಳೂರು ಬೌಲಿಂಗ್ ಬಲ ಮತ್ತಷ್ಟು ಹೆಚ್ಚಲಿದೆ.
ಬ್ಯಾಟಿಂಗ್ನಲ್ಲಿ ಸಿಎಸ್ಕೆ ವೈಫಲ್ಯ
ಬಲಿಷ್ಠ ಸಿಎಸ್ಕೆ ತಂಡಕ್ಕೆ ಬ್ಯಾಟ್ಸ್ಮನ್ಗಳು ಕೈಕೊಡುತ್ತಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಕಳೆದ ಪಂದ್ಯದಲ್ಲಿ ವಾಟ್ಸನ್ ಮತ್ತು ರಾಯುಡು ಹೊರತುಪಡಿಸಿ ಉಳಿದೆಲ್ಲ ಆಟಗಾರರು ಕಡಿಮೆ ರನ್ಗಳಿಸಿ ಪೆವಿಲಿಯನ್ ಸೇರಿದ್ರು. ಅಂತ್ಯದಲ್ಲಿ ಬಂದ ಜಡೇಜಾ ಕೊಂಚ ಅಬ್ಬರಿಸಿದ್ರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.
ಕಳೆದ ಪಂದ್ಯದಲ್ಲಿ ಸಿಎಸ್ಕೆ ಬೌಲರ್ಸ್ ಉತ್ತಮ ಸ್ಪೆಲ್ ಮಾಡಿದ್ರು. ಶಾರ್ದೂಲ್ ಠಾಕೂರ್, ಕರಣ ಶರ್ಮಾ, ಸ್ಯಾಮ್ ಕರ್ರನ್ ಮತ್ತು ಬ್ರಾವೋ ಉತ್ತಮ ಪ್ರದರ್ಶನ ನೀಡಿ ಕೆಕೆಆರ್ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ ಸೇರಿಸಿದ್ರು. ಆದರೆ ದೀಪಕ್ ಚಹಾರ್ ಕೊಂಚ ದುಬಾರಿಯಾಗಿದ್ದರು.
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡ ಇಲ್ಲಿಯವರೆಗೆ ಸಿಎಸ್ಕೆ ಮತ್ತು ಆರ್ಸಿಬಿ ತಂಡಗಳು 24 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, ಆರ್ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.