ಹೈದರಾಬಾದ್: ಐಪಿಎಲ್ 13ನೇ ಆವೃತ್ತಿಯಲ್ಲಿ ಅತಿ ಕಡಿಮೆ ರನ್ ಕಲೆಹಾಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಮವಾರ ಸೋಲುವ ಮೂಲಕ ಬಹುತೇಕ ಈ ಸೀಸನ್ನ ಪ್ಲೇ ಆಫ್ ಕನಸನ್ನು ಕೈ ಬಿಟ್ಟಿದೆ.
ಈವರೆಗಿನ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ಗೆಲುವು ಹಾಗೂ ಏಳು ಪಂದ್ಯಗಳನ್ನ ಸೋತ ಪರಿಣಾಮ, ಕೇವಲ 6 ಪಾಯಿಂಟ್ಸ್ ಕಲೆಹಾಕಿ ಪಾಯಿಂಟ್ಸ್ ಟೇಬಲ್ನಲ್ಲಿ ತಳ ಮುಟ್ಟಿದೆ. ಟಾಸ್ ಗೆದ್ದ ಚೆನ್ನೈ ಐದು ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿತ್ತು. ಸಣ್ಣ ಮೊತ್ತದ ಗುರಿ ಬೆನ್ನುಹತ್ತಿದ ರಾಜಸ್ಥಾನ್ ಇನ್ನೂ ಎರಡು ಓವರ್ಗಳು ಬಾಕಿ ಇರುವಾಗಲೇ ಏಳು ವಿಕೆಟ್ಗಳ ಗೆಲುವು ದಾಖಲಿಸಿತು.
ಇನ್ನು ಈ ಪಂದ್ಯದಲ್ಲಿ ಸೋತರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಹುಟ್ಟು ಹಾಕಿದರು. ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ನಿನ್ನೆಯ ಪಂದ್ಯ ಸೇರಿದಂತೆ 200 ಪಂದ್ಯಗಳಲ್ಲಿ ಕಾಣಿಸಿಕೊಂಡ ಧೋನಿ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಮವಾರದ ಪಂದ್ಯದಲ್ಲಿ ಎರಡು ಸೇರಿದಂತೆ ಒಟ್ಟು 108 ಕ್ಯಾಚ್ಗಳನ್ನು ಹಿಡಿದಿದ್ದಾರೆ. 39 ಸ್ಟಂಪಿಂಗ್ ಮಾಡಿರುವ ಧೋನಿ ವಿಕೆಟ್ ಕೀಪರ್ ಆಗಿ ಒಟ್ಟು 147 ಬ್ಯಾಟ್ಸ್ಮನ್ಸ್ಗಳನ್ನು ಪೆವಿಲಿಯನ್ಗೆ ಕಳುಹಿಸಿ ದಾಖಲೆ ಬರೆದರು. ಮೂರು ವಿಕೆಟ್ ಪಡೆದ್ರೆ ಈ ಸಂಖ್ಯೆ 150ಕ್ಕೆ ತಲುಪಲಿದೆ. ಇದೇ ಐಪಿಎಲ್ನಲ್ಲಿ 105 ಕ್ಯಾಚ್ಗಳನ್ನು ಹಿಡಿಯುವ ಮೂಲಕ ದಿನೇಶ್ ಕಾರ್ತಿಕ್ ಇವರ ಹಿಂದೆ ಇದ್ದಾರೆ.