ನವದೆಹಲಿ: ಇಂದಿನ ದಿನ ಭಾರತದ ಕ್ರೀಡಾ ಇತಿಹಾಸದಲ್ಲಿ ಅದರಲ್ಲೂ ಕ್ರಿಕೆಟ್ ಪ್ರಿಯರಿಗೆ ಸ್ಮರಣೀಯ ದಿನ. ಏಕೆಂದರೆ ಇಂದಿಗೆ ಸರಿಯಾಗಿ 27 ವರ್ಷಗಳ ಹಿಂದೆ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೊದಲ ಏಕದಿನ ಶತಕ ಬಾರಿಸಿದ್ದರು.
ಏಕದಿನ ಪಂದ್ಯದಲ್ಲಿ ಮೊದಲ ಶತಕ ದಾಖಲಿಸಲು ಸಚಿನ್ ತೆಂಡೂಲ್ಕರ್ ತೆಗೆದುಕೊಂಡಿದ್ದು, ಬರೋಬ್ಬರಿ 79 ಪಂದ್ಯಗಳು ಅಥವಾ ಐದು ವರ್ಷ. ಸಚಿನ್ ತಮ್ಮ ಕ್ರಿಕೆಟ್ ಜೀವನದಲ್ಲಿ 49 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಈ ಏಕದಿನ ಶತಕಗಳಿಗೆ ಮೊದಲು ಬುನಾದಿ ಹಾಕಿದ್ದೇ 27 ವರ್ಷಗಳ ಹಿಂದೆ, ಅದೂ ಶ್ರೀಲಂಕಾದ ಕೊಲೊಂಬೋದಲ್ಲಿ..
ಅದು ಸೆಪ್ಟೆಂಬರ್ 9, 1994.. ಶ್ರೀಲಂಕಾದ ಕೊಲೊಂಬೋದಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ತೆಂಡೂಲ್ಕರ್ 130 ಎಸೆತಗಳಲ್ಲಿ 110 ರನ್ ಗಳಿಸಿದ್ದರು. ಟೀಂ ಇಂಡಿಯಾ ಬೇರೆ ಆಟಗಾರರು ಯಾರೂ 50ರನ್ಗಳ ಗಡಿ ದಾಟಿರಲಿಲ್ಲ.
ಸಚಿನ್ ತೆಂಡೂಲ್ಕರ್ ಅವರ ಈ ಶತಕದಿಂದಾಗಿ ಭಾರತ 31 ರನ್ಗಳ ಅಂತರದಿಂದ ಗೆಲುವು ಕಂಡಿತ್ತು. ಎರಡು ಸಿಕ್ಸರ್ ಮತ್ತು ಎಂಟು ಫೋರ್ಗಳ ಮೂಲಕ ಶತಕ ದಾಖಲಿಸಿದ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂದಿತ್ತು.
ಏಕದಿನ ಪಂದ್ಯಕ್ಕೆ ಮೊದಲೇ, ಟೆಸ್ಟ್ ಕ್ರಿಕೆಟ್ನಲ್ಲಿ ಸಚಿನ್ ಶತಕ ದಾಖಲಿಸಿದ್ದರು. ತಾವು 17 ವರ್ಷ, 112 ದಿನ ತುಂಬಿದ್ದಾಗಲೇ ಟೆಸ್ಟ್ ಶತಕ ದಾಖಲಿಸಿದ, ಮೂರನೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಗೆ ಸಚಿನ್ ಪಾತ್ರರಾದರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 119ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. ಈ ಪಂದ್ಯ ಡ್ರಾ ಆಗಿತ್ತು. ಇನ್ನು ಸಚಿನ್ ತೆಂಡೂಲ್ಕರ್ 1989ರ ನವೆಂಬರ್ 15ರಂದು ಟೆಸ್ಟ್ ಕ್ರಿಕೆಟ್ಗೆ, ಅದೇ ವರ್ಷ ಡಿಸೆಂಬರ್ 18ರಂದು ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಸಚಿನ್ ಹೆಸರಲ್ಲಿ ಹಲವಾರು ದಾಖಲೆಗಳಿದ್ದು, 51 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ತಮ್ಮ 24 ವರ್ಷದ ಕ್ರಿಕೆಟ್ನಲ್ಲಿ 6 ವಿಶ್ವಕಪ್ಗಳಲ್ಲಿ ಆಡಿರುವ ಕೀರ್ತಿಯೂ ಸಚಿನ್ ತೆಂಡೂಲ್ಕರ್ ಹೆಸರಿಗಿದೆ.
ಇದನ್ನೂ ಓದಿ: ಚಹಾಲ್,ಕುಲ್ದೀಪ್ ಬಿಟ್ಟು 2017ರಲ್ಲಿ T-20 ಆಡಿರುವ ಅಶ್ವಿನ್ಗೆ ಮಣೆ ಹಾಕಿದ BCCI; ಕಾರಣವಾಗಿದ್ದು ಈ ಅಂಶ!