ರಾಂಚಿ: ಜಾರ್ಖಂಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್ ಬಳಿಕ ನಡೆದ ಮೊದಲ ಅಂತಾರಾಷ್ಟ್ರೀಯ ಟಿ-20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ಕಿವೀಸ್ ನೀಡಿದ 154 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, 17.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ರಾಹುಲ್-ರೋಹಿತ್ 117 ರನ್ ಜೊತೆಯಾಟ:
ಆರಂಭಿಕರಾದ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 117 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ರಾಹುಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮಾಡಿ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್ ಸೇರಿ 65 ರನ್ ಗಳಿಸಿದರು. 14ನೇ ಓವರ್‌ನ 2ನೇ ಎಸೆತದಲ್ಲಿ ಕಿವೀಸ್ ತಂಡದ ನಾಯಕ ಟೀಂ ಸೌಥಿಗೆ ರಾಹುಲ್ ವಿಕೆಟ್ ಒಪ್ಪಿಸಿದರು.
ಕೆ.ಎಲ್‌ಗೆ ಸಾಥ್ ನೀಡಿದ್ದ ರೋಹಿತ್ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮೊರೆ ಹೋದರು. ಬಳಿಕ ಸ್ಫೋಟಕ ಬ್ಯಾಟಿಂಗ್ ಮೂಲಕ ನ್ಯೂಜಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ರೋಹಿತ್ ಅಂತಿಮವಾಗಿ 36 ಎಸೆತಗಳಿಂದ 1 ಬೌಂಡರಿ ಹಾಗೂ 5 ಅಮೋಘ ಸಿಕ್ಸರ್ ಸೇರಿ 55 ರನ್ ಗಳಿಸಿ ಔಟಾದರು.
ಬಳಿಕ ವೆಂಕಟೇಶ್ ಅಯ್ಯರ್ 12 ರನ್ ಗಳಿಸಿ ಔಟಾಗದೆ ಉಳಿದರು. ಕಳೆದ ಪಂದ್ಯದಲ್ಲಿ ತಂಡದ ಗೆಲುವಿಗೆ ಅರ್ಧ ಶತಕದ ಮೂಲಕ ಉಪಯುಕ್ತ ಕಾಣಿಕೆ ನೀಡಿದ್ದ ಸೂರ್ಯಕುಮಾರ್ ಯಾದವ್ ಇಂದು ನಿರಾಶೆ ಮೂಡಿಸಿದರು. ಕೇವಲ 1 ರನ್‌ಗಳಿಸಿ ಸೌಥಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ರಿಷಬ್ ಪಂತ್ 6 ಎಸೆತಗಳಲ್ಲಿ ಎರಡು ಸಿಕ್ಸರ್ ಸೇರಿ 12 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ನ್ಯೂಜಿಲೆಂಡ್ ಪರ ಟೀಂ ಸೌಥಿ 3 ವಿಕೆಟ್ ಪಡೆದರು.
ಈ ಗೆಲುವಿನ ಮೂಲಕ ರೋಹಿತ್ ಪಡೆಯು ಕಿವೀಸ್ ವಿರುದ್ಧದ ಈ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದಿದೆ. ಅಂತಿಮ ಟಿ-20 ಪಂದ್ಯವು ನ. 21ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.